
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕ್ರೌರ್ಯ ಯಾವ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಈ ಭೀಕರ ಘಟನೆಯೇ ಸಾಕ್ಷಿಯಾಗಿದೆ. ಚಿಂದಿ ಆಯ್ದುಕೊಂಡು ಬದುಕುತ್ತಿದ್ದ ಬಡ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ಗುಂಪು ಅಮಾನವೀಯವಾಗಿ ಹಲ್ಲೆ ನಡೆಸಿ, ಜೀವಂತವಾಗಿ ಸುಟ್ಟುಹಾಕಲು ಯತ್ನಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಪಾದರಾಯನಪುರ ನಿವಾಸಿ ಮೊಹಮ್ಮದ್ ಸಾಜಿ ಎಂಬ ಯುವಕ ಮುಂಜಾನೆ ವೇಳೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಭದ್ರಯ್ಯನ ಪಾಳ್ಯದ ಗುಡ್ಡದ ಬಳಿ ತೆರಳಿದ್ದ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ದುಷ್ಕರ್ಮಿಗಳ ಗ್ಯಾಂಗ್ ಮೊಹಮ್ಮದ್‌ನ ಕೈಕಾಲುಗಳನ್ನು ಕಟ್ಟಿಹಾಕಿ, ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದೆ.
ಇಡೀ ದೇಹಕ್ಕೆ ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ತೀವ್ರ ನೋವು ಮತ್ತು ಉರಿ ತಾಳಲಾರದೆ ಮೊಹಮ್ಮದ್ ಗುಡ್ಡದ ಮೇಲಿಂದ ಉರುಳಿಕೊಂಡು ರಸ್ತೆ ಪಕ್ಕಕ್ಕೆ ಬಂದು ಬಿದ್ದಿದ್ದಾನೆ. ಈ ವೇಳೆ ರಸ್ತೆ ಬದಿಯಲ್ಲಿ ಬೆಂಕಿಯ ಕೆನ್ನಾಲಿಗೆಯಲ್ಲಿ ನರಳಾಡುತ್ತಿದ್ದ ಯುವಕನನ್ನು ಕಂಡ ಸ್ಥಳೀಯರು ತಕ್ಷಣವೇ ಬೆಂಕಿ ನಂದಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್‌ಗೆ ದಾಖಲಿಸಿದ್ದಾರೆ.

ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೊಹಮ್ಮದ್‌ನ ದೇಹ ಶೇಕಡ 80ರಷ್ಟು ಸುಟ್ಟುಹೋಗಿದ್ದು, ಆತನ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ವಂಶಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಪೈಶಾಚಿಕ ಕೃತ್ಯ ಎಸಗಿದ ಆರೋಪಿಗಳ ಪತ್ತೆಗಾಗಿ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಕೇವಲ ಚಿಂದಿ ಆಯ್ದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಯುವಕನ ಮೇಲೆ ಇಂತಹ ಕ್ರೂರ ಕೃತ್ಯ ಎಸಗಲು ಕಾರಣವೇನು? ನಗರದಲ್ಲಿ ಹೆಚ್ಚುತ್ತಿರುವ ಇಂತಹ ಅಪರಾಧ ಕೃತ್ಯಗಳಿಗೆ ಕಡಿವಾಣ ಬೀಳುವುದು ಯಾವಾಗ? ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕಿದೆ.
