
ಧಾರವಾಡ .27: ಬೇಸಿಗೆ ಕಾಲ ಮುಗಿಯುವವರೆಗೆ ಜಿಲ್ಲೆಯಲ್ಲಿ ಯಾವುದೇ ಗ್ರಾಮ ಹಾಗೂ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ತಹಶೀಲ್ದಾರರು ಮತ್ತು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ನಿರಂತರವಾಗಿ ನಿಗಾವಹಿಸಬೇಕು. ಈಗಾಗಲೇ ಜಿಲ್ಲೆಯ ವಿವಿಧ ತಾಲೂಕುಗಳ 15 ಗ್ರಾಮಗಳಲ್ಲಿ 17 ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಜಿಲ್ಲಾಡಳಿತ ಮೇಲಸ್ತುವಾರಿಯಲ್ಲಿ ಕ್ರಮವಹಿಸಿ, ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಅವರು ಸೋಮವಾರ (ಏ.27) ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ 2025-26 ನೇ ಸಾಲಿನ ಮಾರ್ಚ 2026 ರ ಅಂತ್ಯಕ್ಕೆ ಕೊನೆಗೊಂಡಂತೆ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆಯಡಿ ನಾಲ್ಕನೇಯ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯನ್ನು ಜರುಗಿಸಿ, ಮಾತನಾಡಿದರು.
ಮುಂಗಾರು ಪೂರ್ವದಲ್ಲಿ ಮಳೆಗಳು ಹೆಚ್ಚಾಗುತ್ತಿದ್ದು, ಯಾವುದೇ ಹಾನಿಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ರೈತರಿಗೆ ಅಗತ್ಯವಿರುವ ಬೀಜ, ರಸಗೊಬ್ಬರ ಪೂರೈಕೆಯಾಗಬೇಕು. ಬಿತ್ತನೆ ಸಮಯದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಕೃಷಿ ಇಲಾಖೆ ಯೋಜನಾ ಬದ್ಧವಾಗಿ ಬೀಜ, ರಸಗೊಬ್ಬರ ವಿತರಣೆಯನ್ನು ಮಾಡಬೇಕೆಂದು ಸಚಿವರು ಸೂಚಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯು ಜಿಲ್ಲೆಯ ಎಪಿಎಂಸಿ ಗಳ ಸುಧಾರಣೆಗೆ ಅಗತ್ಯವಾದ ಪ್ರಸ್ತಾವನೆಯನ್ನು ರೂಪಿಸಬೇಕು. ಪಿಪಿಟಿ ಮೂಲಕ ಇಲಾಖೆಯಿಂದ ಜನಪ್ರತಿನಿಧಿಗಳ ಮುಂದೆ ಪ್ರದರ್ಶನ ನೀಡಿ, ಎಪಿಎಂಸಿ ಗಳ ಅಭಿವೃದ್ಧಿಗೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿವರಿಸಬೇಕು. ಅಗತ್ಯವಿದ್ದಲ್ಲಿ ಸರ್ಕಾರಿಂದ ವಿಶೇಷ ಅನುದಾನ ತರಲು ಪ್ರಯತ್ನಿಸಲಾಗುವುದು. ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ ಕೇಂದ್ರಗಳಲ್ಲಿ ಚೀಲಗಳ ಕೊರತೆಯಾದ ಕುರಿತು ಮನವಿ ಸಲ್ಲಿಕೆಯಾಗುತ್ತಿವೆ. ಈ ಕುರಿತು ಕ್ರಮವಹಿಸಿ, ಜಿಲ್ಲೆಗೆ ಅಗತ್ಯವಿರುವ ಗೋಣಿಚೀಲಗಳನ್ನು ತರಿಸಬೇಕು. ಮತ್ತು ಬ್ಯಾಹಟ್ಟಿ ಖರೀದಿ ಕೇಂದ್ರದಿಂದ ಖರೀದಿಸಿದ್ದ ರೈತರ ಹೆಸರು ಕಾಳು ಕುರಿತು ಹಣ ಪಾವತಿಸುವಲ್ಲಿ ತಾಂತ್ರಿಕ ಸಮಸ್ಯೆ ಆಗಿದ್ದು, ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಸಚಿವರು ನಿರ್ದೇಶಿಸಿದರು.

ಕುಡಿಯುವ ನೀರು ಸಂಬಂಧಿತ ಜಲಜೀವನ ಮಿಷನ್ ಯೋಜನೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿ, ಎಲ್ ಆ್ಯಂಡ್ ಟಿ ಕಂಪನಿಗೆ ಈಗಾಗಲೇ ರೂ. 30 ಕೋಟಿ ದಂಡವಿಧಿಸಲಾಗಿದೆ. ಮೇ ಅಂತ್ಯದೊಳಗೆ 28 ಗ್ರಾಮಗಳಿಗೆ ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡಲು ಕ್ರಮವಹಿಸಿದ್ದಾರೆ. ಮಾರ್ಚ 2027 ರವೆರೆಗೆ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿಲಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಜಲಜೀವನ ಮಿಷನ್ ಕಾಮಗಾರಿಗಳು ಗುಣಮಟ್ಟದಿಂದ ಮತ್ತು ಒಪ್ಪಂದದಂತೆ ಅನುಷ್ಠಾನಗೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಮತ್ತು ಸರಿಯಾಗಿ ಮೇಲುಸ್ತುವಾರಿ ವಹಿಸಬೇಕೆಂದು ಸಚಿವರು ಸೂಚನೆ ನೀಡಿದರು.
ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ 43 ಎಂಎಲ್‍ಡಿ (ಒಐಆ) ಪ್ರಮಾಣದ ಕುಡಿಯುವ ನೀರಿನ ಸರಬರಾಜು ಪ್ರಾರಂಭವಾಗಿದೆ. ಮೇ 10 ರೊಳಗಾಗಿ ಎಲ್ಲ ವಾರ್ಡಗಳಿಗೆ ನಾಲ್ಕರಿಂದ ಐದು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುವುದೆಂದು ಪಾಲಿಕೆ ಹಾಗೂ ಎಲ್ ಆ್ಯಂಡ್ ಟಿ ಅಧಿಕಾರಿಗಳು ತಿಳಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿ, ಶೀಘ್ರವಾಗಿ ಸಾರ್ವಜನಿಕರಿಗೆ ನಿಯಮಿತವಾಗಿ ಕುಡಿಯುವ ನೀರು ದೊರೆಯುವಂತೆ ಕ್ರಮವಹಿಸಬೇಕೆಂದು ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ನವಲಗುಂದ ಸೇರಿದಂತೆ ಜಿಲ್ಲೆಯಲ್ಲಿ ತೆರೆದಿರುವ ಸರಕಾರದ ವಿವಿಧ ಖರೀದಿ ಕೇಂದ್ರಗಳಲ್ಲಿ ಗೋಣಿಚೀಲಗಳ ಕೊರತೆ ಉಂಟಾಗಿದೆ. ರೈತರು ಕಡಲೆ ರಾಶಿ ತೆಗೆದುಕೊಂಡು ಖರೀದಿ ಕೇಂದ್ರಗಳ ಮುಂದೆ ಕಾಯುತ್ತಿದ್ದಾರೆ. ಅವರಿಗೆ ಅಗತ್ಯವಿರುವಷ್ಟು ಗೋಣಿಚೀಲ ತಕ್ಷಣ ಪೂರೈಸಲು ಕ್ರಮ ವಹಿಸಬೇಕೆಂದು ಹೇಳಿದರು. ಮತ್ತು ಬ್ಯಾಹಟ್ಟಿ ಖರೀದಿ ಕೇಂದ್ರದಲ್ಲಿ ಹೆಸರು ಖರೀದಿಸಿ, ಸುಮಾರು 81 ಜನ ರೈತರಿಗೆ ಹಣ ನೀಡಿಲ್ಲ. ಈ ಕುರಿತು ಎಪಿಎಂಸಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ, ಖರೀದಿ ಮೊತ್ತ ಪಾವತಿಸಲು ಕ್ರಮವಹಿಸಬೇಕೆಂದು ಶಾಸಕರು ತಾಕೀತು ಮಾಡಿದರು.
ವಿಧಾನ ಪರಿಷತ್ತ ಸರಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರು ಮಾತನಾಡಿ, ಜಿಲ್ಲೆಯಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಅಧಿಕಾರಿಗಳು ಶೀಘ್ರ ಕ್ರಮವಹಿಸಬೇಕು ಎಂದು ಹೇಳಿದರು.

ಹುಬ್ಬಳ್ಳಿಯ ಗಬ್ಬೂರ ಕ್ರಾಸ್‍ದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾತ್ಕಾಲಿಕ ತಕ್ಷಣ ಬಸ್ ಸ್ಟಾಂಡ್ ನಿರ್ಮಿಸಬೇಕು. ಸುಡುಬಿಸಿಲಿನಲ್ಲಿ ಅನೇಕ ಪ್ರಯಾಣಿಕರು, ಗ್ರಾಮಸ್ಥರು ಬಸ್‍ಗಾಗಿ ಕಾಯಿತ್ತಾ ನಿಂತಿರುತ್ತಾರೆ. ಅಲ್ಲಿ ಬಸ್ ನಿಲ್ದಾಣ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಮತ್ತು ರಾಯನಾಳ ಗ್ರಾಮದಲ್ಲಿ ಎನ್.ಎಚ್-4 ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆಗೆ ಲಿಂಕ್ ರಸ್ತೆ ನಿರ್ಮಿಸಿಕೊಡಲು ಗ್ರಾಮಸ್ಥರು ಮನವಿ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಬೇಡಿಕೆಯನ್ನು ಪರಿಶೀಲಿಸಿ, ಮುಂಗಾರು ಪೂರ್ವದಲ್ಲಿ ಕ್ರಮವಹಿಸಬೇಕೆಂದು ಅವರು ಹೇಳಿದರು.
ಶಾಸಕ ಎಂ.ಆರ್.ಪಾಟೀಲ ಅವರು ಮಾತನಾಡಿ, ಬೆಂಬಲ ಬೆಲೆ ಯೋಜನೆಯಡಿ ತಾಲೂಕುಗಳಲ್ಲಿ ತೆರೆದಿರುವ ಖರೀದಿ ಕೇಂದ್ರಗಳು ಸರಿಯಾಗಿ ರೈತರಿಗೆ ಸ್ಪಂದಿಸಬೇಕು. ಕಡಲೆ ಖರೀದಿಗೆ ಸಣಬಿನ ಚೀಲಗಳ ಕೊರತೆ ಆಗಿದೆ. ಅಧಿಕಾರಿಗಳು ಚೀಲ ಪೂರೈಸಿ, ಕಡಲೆ ಕಾಳು ಖರೀದಿಸಬೇಕು. ಈಗಾಗಲೇ ಮಳೆ ಆರಂಭವಾಗಿರುವದರಿಂದ ರೈತರು ಕೃಷಿ ಕಾರ್ಯ ಆರಂಭಿಸಿದ್ದಾರೆ. ರೈತರಿಗೆ ಅಗತ್ಯ ಬೀಜ, ಗೊಬ್ಬರ ಪೂರೈಸಲು ಕ್ರಮವಹಿಸಬೇಕೆಂದು ಅವರು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಅವರು ಮಾತನಾಡಿ, ಅವಳಿನಗರದಲ್ಲಿ ಕುಡಿಯುವ ನೀರು ಸರಬರಾಜು ನಿಯಮಿತವಾಗಿ ಆಗುತ್ತಿಲ್ಲ. ಪ್ರತಿ ಎಂಟತ್ತು ದಿನಗಳಿಗೆ ಒಮ್ಮೆ ನೀರು ಬರುತ್ತಿದೆ. ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳು ವಾರ್ಡಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಅಂತರಜಾತಿ ವಿವಾಹ ಆಗಿರುವ ಕುಟುಂಬಗಳಿಗೆ ಸರ್ಕಾರದ ಪ್ರೋತ್ಸಾಹ ಧನ ವಿತರಣೆಯಾಗಬೇಕು. ಅನೇಕ ಅರ್ಜಿಗಳು ಸಮಾಜ ಕಲ್ಯಾಣ ಇಲಾಖೆಯಿಂದ ವಿಲೇವಾರಿಗೆ ಬಾಕಿ ಇದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮವಹಿಸಿ, ಸರ್ಕಾರದ ಸೌಲಭ್ಯ ಅರ್ಹರಿಗೆ ತಲುಪವಂತೆ ಮಾಡಬೇಕೆಂದು ಅವರು ಹೇಳಿದರು.
ವಿಧಾನ ಪರಿಷತ್ತ ಸದಸ್ಯ ಎಫ್.ಎಚ್.ಜಕ್ಕಪ್ಪನವರ ಮಾತನಾಡಿ, ಪ್ರಸಕ್ತ ಸಾಲಿನ ಶಾಲಾ ಫಲಿತಾಂಶ ಉತ್ತಮ ಪಡಿಸಿರುವ ಅಧಿಕಾರಿಗಳನ್ನು ಅಭಿನಂದಿಸಿದರು. ಹುಬ್ಬಳ್ಳಿ ನಗರದ ಚಲವಾದಿ ಓಣಿಯಲ್ಲಿ ಸಾರ್ವಜನಿಕರಿಗೆ ಕುಡಿಯಲು ನಿರಂತರ ನೀರು ವ್ಯವಸ್ಥೆ ಮಾಡಬೇಕು. ಇದು ಡಾ.ಬಿ.ಆರ್.ಅಂಬೇಡ್ಕರ್ ಅವರು ಭೇಟಿ ನೀಡಿದ ಸ್ಥಳವಾಗಿರುವದರಿಂದ ಐತಿಹಾಸಿಕ ಪ್ರದೇಶವಾಗಿದೆ. ಈ ಸ್ಥಳದ ಅಭಿವೃದ್ಧಿ ಪಡಿಸಲು ಮತ್ತು ಇಲ್ಲಿನ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಪಾಲಿಕೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಸ್ನೇಹಲ್. ಆರ್. ಅವರು ಮಾತನಾಡಿ, ಜಿಲ್ಲೆಯ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಗಿದ್ದು, ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಲಾಗಿದ್ದು, ಉಳಿದಂತೆ ಬರಬೇಕಾದ ಅನುದಾನವನ್ನು ನಿಯಮಾನುಸಾರ ವೆಚ್ಚ ಮಾಡಲು ಸೂಚನೆ ನೀಡಲಾಗಿದೆ. ಖರೀದಿ ಕೇಂದ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಎಪಿಎಂಸಿ ಹಾಗೂ ಇಲಾಖಾ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ಬ್ಯಾಹಟ್ಟಿ ಖರೀದಿ ಕೇಂದ್ರದ ಹೆಸರು ಮಾರಾಟ ಕುರಿತ ರೈತರ ಸಮಸ್ಯೆಯನ್ನು ಪರಿಶೀಲಿಸಿ, ಸೂಕ್ತ ವರದಿ ಸಲ್ಲಿಸಲು ಉಪವಿಭಾಗಾಧಿಕಾರಿಗಳನ್ನು ನೇಮಿಸಲಾಗಿದೆ. ಅವರ ವರದಿಯನ್ನು ಪರಿಶೀಲಿಸಿ, ಸೂಕ್ತ ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಗ್ರಾಮೀಣ ಕುಡಿಯುವ ನೀರು, ಲೋಕೋಪಯೋಗಿ ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಪಶುಪಾಲನೆ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.
ವೇದಿಕೆಯಲ್ಲಿ ಮಹಾನಗರ ಪೆÇಲೀಸ್ ಆಯುಕ್ತ ಎನ್.ಶಶಿಕುಮಾರ, ಎನ್.ಡಬ್ಲು.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಗುಂಜನ್ ಆರ್ಯ, ಉಪ ಪೆÇಲೀಸ್ ಆಯುಕ್ತೆ ಶೃತಿ ಎನ್.ಎಸ್. ಇದ್ದರು.
ಸಭೆಯಲ್ಲಿ ಜಿಲ್ಲಾ ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ನಾಗರಾಜ ಹೆಗ್ಗಣ್ಣವರ, ಆರ್.ಎಚ್.ಕೋನರಡ್ಡಿ, ಸಲೀಮ್ ಸುಂಡಕೆ, ಯಲ್ಲಪ್ಪ ಗುಡದರಿ, ಲಲಿತಾ ಗುರುಸಿದ್ದೇಶ ಬೆಂಗೇರಿ ಹಾಗೂ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುμÁ್ಠನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ, ಧಾರವಾಡ ಕೆಎಂಎಫ್ ಅಧ್ಯಕ್ಷ ಶಂಕರ ಮುಗದ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಉಪ ನಿರ್ದೇಶಕ ಲಮಾಣಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಇಇ ಜಗದೀಶ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಶಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

