ಮಾಹಿತಿ ನೀಡದೆ ಸತಾಯಿಸುತ್ತಿರುವ ಅಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು:

Spread the love

ನವಲಗುಂದ: ಮಾಹಿತಿ ಹಕ್ಕು ಕಾಯ್ದೆಯಡಿ ನಿಯಮಬದ್ಧವಾಗಿ ಸಾವಿರಾರು ರೂಪಾಯಿ ಶುಲ್ಕ ಪಾವತಿಸಿದರೂ ಮಾಹಿತಿ ನೀಡದೆ ಸತಾಯಿಸುತ್ತಿರುವ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಆಡಳಿತಾಧಿಕಾರಿಯ ವಿರುದ್ಧ ಇದೀಗ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕರ್ತವ್ಯಲೋಪದ ಆರೋಪದಡಿ ಆರ್.ಟಿ.ಐ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಅವರು ಈ ದೂರು ದಾಖಲಿಸಿದ್ದು, ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ:

ಮಾಬುಸಾಬ ಯರಗುಪ್ಪಿ ಅವರು ದಿನಾಂಕ 13-10-2025 ರಂದು ಮಾಹಿತಿ ಹಕ್ಕು ಕಾಯ್ದೆ 2005 ರ ಅಡಿಯಲ್ಲಿ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಅರ್ಜಿಯೊಂದನ್ನು ಸಲ್ಲಿಸಿದ್ದರು. ಇದರಲ್ಲಿ 2019 ರಿಂದ 2025ರ ಅವಧಿಯಲ್ಲಿ ಇಲಾಖೆಗೆ ಬಂದಿರುವ ಸರ್ಕಾರಿ ಅನುದಾನ, ಬಿಲ್‌ಗಳು, ವೋಚರ್‌ಗಳು ಮತ್ತು ಚೆಕ್‌ಗಳ ದೃಢೀಕೃತ ಪ್ರತಿಗಳನ್ನು ನೀಡುವಂತೆ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಹಾಯಕ ಆಡಳಿತಾಧಿಕಾರಿಗಳು, ಒಟ್ಟು 41,867 ಪುಟಗಳ ಮಾಹಿತಿಯಿದ್ದು, ಇದಕ್ಕೆ ನಿಗದಿತ ಶುಲ್ಕ ಪಾವತಿಸುವಂತೆ ಸೂಚಿಸಿದ್ದರು.

​ಅಧಿಕಾರಿಗಳ ಸೂಚನೆಯಂತೆ ಮಾಬುಸಾಬ ಅವರು ಸಾಲ ಮಾಡಿ ಒಟ್ಟು 83,734 ರೂ. ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ (ಸಂಖ್ಯೆ: 934010) ಅನ್ನು ದಿನಾಂಕ 28-02-2026 ರಂದು ಕಚೇರಿಗೆ ಸಲ್ಲಿಸಿದ್ದಾರೆ. ಆದರೆ, ಇಷ್ಟು ಬೃಹತ್ ಮೊತ್ತದ ಶುಲ್ಕವನ್ನು ಇಲಾಖೆಗೆ ಪಾವತಿಸಿದರೂ, ನಿಯಮದಂತೆ 30 ದಿನಗಳೊಳಗೆ ಮಾಹಿತಿ ನೀಡದೆ ಸಾರ್ವಜನಿಕ ಮಾಹಿತಿ ಅಧಿಕಾರಿಯು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಮಾಬುಸಾಬ ಆರೋಪಿಸಿದ್ದಾರೆ.

ಭ್ರಷ್ಟಾಚಾರದ ಶಂಕೆ:

ಶುಲ್ಕ ಪಾವತಿಸಿದ ಮೇಲೂ ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಅನುಮಾನವನ್ನು ದಟ್ಟವಾಗಿಸಿದೆ. ಇದು ಮಾಹಿತಿ ಹಕ್ಕು ಕಾಯ್ದೆಯ ಘೋರ ಉಲ್ಲಂಘನೆಯಾಗಿದ್ದು, ಆಡಳಿತಾಧಿಕಾರಿಯ ಬೇಜವಾಬ್ದಾರಿತನವನ್ನು ಖಂಡಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಪ್ರಸ್ತುತ ಲೋಕಾಯುಕ್ತದಲ್ಲಿ ಪ್ರಕರಣ ಸಂಖ್ಯೆ: ಕಂಪ್ಲೇಟ್/ಉಪಲೋಕ/ಬಿಜಿಎಮ್/1988/2026 ಅಡಿ ದೂರು ದಾಖಲಾಗಿದೆ.

​ಲೋಕಾಯುಕ್ತರು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಮೇಲೆ ದಾಳಿ ನಡೆಸಿ, ಅನುದಾನಕ್ಕೆ ಸಂಬಂಧಪಟ್ಟ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಬೇಕು. ಅಲ್ಲದೆ, ಸಾರ್ವಜನಿಕರಿಗೆ ಮಾಹಿತಿ ನೀಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು ಎಂದು ಮಾಬುಸಾಬ ಯರಗುಪ್ಪಿ ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *