
ಕುಂದಗೋಳ: ತಾಲ್ಲೂಕಿನ ಸಂಶಿ ಗ್ರಾಮದಲ್ಲಿ ಬುಧವಾರ ಹೆಸ್ಕಾಂ (HESCOM) ಇಲಾಖೆಯ ನಿರ್ಲಕ್ಷ್ಯಕ್ಕೆ ಏಳು ವರ್ಷದ ಮುಗ್ಧ ಬಾಲಕಿ ತಂಜಿಯಾ ತೌಸಿಪ್ ಪಠಾಣ್ ಬಲಿಯಾದ ದುರ್ಘಟನೆ ಸಂಭವಿಸಿದ್ದು, ಇಡೀ ಗ್ರಾಮದಲ್ಲಿ ಆಕ್ರೋಶ ಮತ್ತು ಶೋಕದ ವಾತಾವರಣ ನಿರ್ಮಾಣವಾಗಿದೆ. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಇಲಾಖೆಯ ಬೇಜವಾಬ್ದಾರಿತನವೇ ಈ ದುರಂತಕ್ಕೆ ಕಾರಣ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಗ್ರಾಮದ ಸೊಸಾಯಿಟಿ ಸಮೀಪದ ಮನೆಯೊಂದರ ಬಳಿ ವಿದ್ಯುತ್ ಕಂಬ ಮತ್ತು ಮುಖ್ಯ ವಿದ್ಯುತ್ ಲೈನ್ ಅತ್ಯಂತ ಅಪಾಯಕಾರಿಯಾಗಿ ಅಳವಡಿಸಲಾಗಿತ್ತು ಎನ್ನಲಾಗಿದೆ. ಮನೆಯ ಗೋಡೆಗೆ ತಾಗುವಷ್ಟು ಹತ್ತಿರದಲ್ಲೇ ವಿದ್ಯುತ್ ತಂತಿ ಹಾದುಹೋಗಿದ್ದರೂ, ಅದನ್ನು ಸಮರ್ಪಕವಾಗಿ ಸುರಕ್ಷಿತಗೊಳಿಸದೇ ಕೇವಲ ಪೈಪ್ ಅಳವಡಿಸಿ, ಟೇಪ್ ಸುತ್ತದೆ ಹಾಗೆಯೇ ಬಿಟ್ಟಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಪೈಪ್ ಮಧ್ಯೆ ಉಳಿದಿದ್ದ ಗ್ಯಾಪ್ ಭಾಗದಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕಿಯ ಕೈ ತಗುಲಿದ್ದು, ತಕ್ಷಣವೇ ವಿದ್ಯುತ್ ಪ್ರವಹಿಸಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಈ ಘಟನೆ ಕೇವಲ ಆಕಸ್ಮಿಕವಲ್ಲ, ಇಲಾಖೆಯ ನಿರ್ಲಕ್ಷ್ಯ ಮತ್ತು ಸುರಕ್ಷತಾ ವೈಫಲ್ಯದ ಪರಿಣಾಮ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೆ ಅಮಾಯಕ ಬಾಲಕಿಯ ಜೀವ ಉಳಿಯಬಹುದಿತ್ತು ಎಂಬ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ.
ಘಟನೆ ಕುರಿತು ಮಾಧ್ಯಮ ಪ್ರತಿನಿಧಿಗಳು ಹೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಕೇಳಿದಾಗ, “ಘಟನೆ ಆ ರೀತಿಯಲ್ಲಿ ನಡೆದಿಲ್ಲ. ಇಲಾಖೆಯಿಂದ ಬೇರೆ ರೀತಿಯ ವರದಿ ಸಲ್ಲಿಸಲಾಗಿದೆ” ಎಂಬ ಪ್ರತಿಕ್ರಿಯೆ ನೀಡಿರುವುದು ಸಾರ್ವಜನಿಕರ ಅನುಮಾನಕ್ಕೆ ಮತ್ತಷ್ಟು ಕಾರಣವಾಗಿದೆ. ಇಲಾಖೆಯ ತಪ್ಪುಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಪ್ರಕರಣದ ನೈಜ ಸತ್ಯ ಪೊಲೀಸ್ ಇಲಾಖೆಯ ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಹೊರಬರಬೇಕಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂಬ ಆಗ್ರಹವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

