ಗುಡಗೇರಿಯಲ್ಲಿ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಬಲಿಯಾದ ಬಾಲಕ: 108 ಅಂಬುಲೆನ್ಸ್‌ ವಿರುದ್ಧ ಸಾರ್ವಜನಿಕರ ಆಕ್ರೋಶ

Spread the love

ಗುಡಗೇರಿಯಲ್ಲಿ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಬಲಿಯಾದ ಬಾಲಕ: 108 ಅಂಬುಲೆನ್ಸ್‌ ವಿರುದ್ಧ ಸಾರ್ವಜನಿಕರ ಆಕ್ರೋಶ

ಕುಂದಗೋಳ: ತಾಲ್ಲೂಕಿನ ಗುಡಗೇರಿ: ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹಾಗೂ ತುರ್ತು ಸೇವೆ ಒದಗಿಸಬೇಕಾದ 108 ಅಂಬುಲೆನ್ಸ್‌ನ ಬೇಜವಾಬ್ದಾರಿತನದಿಂದಾಗಿ ವಿದ್ಯುತ್ ಆಘಾತಕ್ಕೊಳಗಾಗಿದ್ದ 12 ವರ್ಷದ ಬಾಲಕನೊಬ್ಬ ದಾರಿಮಧ್ಯೆಯೇ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಡೆದಿದೆ. ಗ್ರಾಮದ ಅಂಬೇಡ್ಕರ್ ನಗರದ ನಿವಾಸಿ ಕಾರ್ತಿಕ್ ಮಾಂತೇಶ ಪೂಜಾರ (12) ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ.

ಶನಿವಾರ ಕಾರ್ತಿಕ್‌ಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿದ್ದು, ತಕ್ಷಣವೇ ಆತನನ್ನು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಸ್ಥಿತಿಯಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ, ತುರ್ತು ಸಂದರ್ಭದಲ್ಲಿ ಜೀವ ರಕ್ಷಿಸಬೇಕಾದ ಆರೋಗ್ಯ ಕೇಂದ್ರದಲ್ಲೇ ಸೂಕ್ತ ಚಿಕಿತ್ಸಾ ಸೌಲಭ್ಯಗಳ ಕೊರತೆ ಕಂಡುಬಂದಿದೆ ಎಂಬ ಆರೋಪ ಕೇಳಿಬಂದಿದೆ. ಬಾಲಕನಿಗೆ ಅಗತ್ಯ ಪ್ರಥಮ ಚಿಕಿತ್ಸೆ ಕೂಡ ಸಮರ್ಪಕವಾಗಿ ದೊರೆಯಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬಳಿಕ ಹೆಚ್ಚಿನ ಚಿಕಿತ್ಸೆಗೆ ಕುಂದಗೋಳ ಆಸ್ಪತ್ರೆಗೆ ಕರೆದೊಯ್ಯಲು 108 ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅಂಬುಲೆನ್ಸ್‌ನಲ್ಲಿ ಕನಿಷ್ಠ ಆಕ್ಸಿಜನ್ ಕಿಟ್ ಅಥವಾ ಅಗತ್ಯ ಜೀವ ರಕ್ಷಕ ವೈದ್ಯಕೀಯ ಸೌಲಭ್ಯಗಳೇ ಇರಲಿಲ್ಲ ಎನ್ನಲಾಗಿದೆ. ಪರಿಣಾಮವಾಗಿ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕ ಚಿಕಿತ್ಸೆ ಸಿಗದೇ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಘಟನೆಗೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಅಂಬುಲೆನ್ಸ್ ಸಿಬ್ಬಂದಿಯ ಬೇಜವಾಬ್ದಾರಿತನವೇ ನೇರ ಕಾರಣ ಎಂದು ಆರೋಪಿಸಿ ಮೃತ ಬಾಲಕನ ಸಂಬಂಧಿಕರು ಹಾಗೂ ನೂರಾರು ಸಾರ್ವಜನಿಕರು ಗುಡಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಪಷ್ಟನೆ ನೀಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡಿಸಿದ್ದಾರೆ

ಘಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. “ಬೇಕು ಬೇಕು ನ್ಯಾಯ ಬೇಕು” ಎಂದು ಘೋಷಣೆ ಕೂಗಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಂದನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಿದ್ದು, ಸ್ಥಳದಲ್ಲಿದ್ದವರ ಮನಕಲಕುವಂತ ದೃಶ್ಯಗಳು ಕಂಡುಬಂದವು. ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರಿ ಆಸ್ಪತ್ರೆ ಹಾಗೂ ತುರ್ತು ಆರೋಗ್ಯ ಸೇವೆಗಳ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *