
ಧಾರವಾಡ: ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆ ಮಾಡುವ ಮಹೋನ್ನತ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ‘ಆರವ್ ಪೌಂಡೇಶನ್ (ರಿ) ಧಾರವಾಡ’ ಸಂಸ್ಥೆಯ ಉದ್ಘಾಟನಾ ಸಮಾರಂಭವು ಮೇ 26 ರಂದು ನಗರದ ರಂಗಾಯಣ ಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನೆರವೇರಿತು. ಶಿರಕೊಳದ ಶ್ರೀ ಶ್ರೀ ಶ್ರೀ ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಈ ಸಮಾರಂಭವನ್ನು ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಹನಮಂತಪ್ಪ ಆಲ್ಕೋಡ ಅವರು ದೀಪ ಬೆಳಗಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರು ಸಂಸ್ಥೆಯ ನೂತನ ಲೋಗೋವನ್ನು ಅನಾವರಣಗೊಳಿಸಿ, ಸಂಸ್ಥೆಯ ಸಮಾಜ ಸೇವಾ ಚಟುವಟಿಕೆಗಳಿಗೆ ತನು-ಮನ-ಧನದ ಬೆಂಬಲ ಸಿಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಮಾದರ ಅವರು ಮಾತನಾಡಿ, ಸಮಾಜದಲ್ಲಿನ ಶೋಷಿತ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಮತ್ತು ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪ ಹೊಂದಿರುವುದಾಗಿ ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ರೋಹಿಣಿ ಉಪರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪೌಂಡೇಶನ್ ಸ್ಥಾಪನೆಯ ಹಿಂದಿರುವ ಉದ್ದೇಶಗಳು, ಭವಿಷ್ಯದ ಯೋಜನೆಗಳು ಹಾಗೂ ಸಮಾಜ ಸೇವಾ ಚಟುವಟಿಕೆಗಳ ಕುರಿತು ಸಭೆಗೆ ವಿವರಿಸಿದರು.

ಮುಖ್ಯ ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷರಾದ ಡಾ. ಸಂಗೀತಾ ಮಾನೆ ಅವರು ಮಾತನಾಡಿ, ಇಂದಿನ ಯುವ ಪೀಳಿಗೆಯು ತಂತ್ರಜ್ಞಾನದ ಜೊತೆಗೆ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬ ಯುವಕನೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಭರಮಣ್ಣ ಕುರಿ ನೇತೃತ್ವದ ತಂಡದಿಂದ ಜರುಗಿದ ಜಾನಪದ ಕಲೆಯಾದ ಡೊಳ್ಳಿನ ಪದಗಳ ಪ್ರದರ್ಶನ ಕಾರ್ಯಕ್ರಮದ ರಂಗು ಹೆಚ್ಚಿಸಿತು. ಇದೇ ವೇಳೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸಾವಿತ್ರಿಭಾವಿ ಪೂಜಾರ, ಕಲ್ಲಪ್ಪ ಮರ್ಲೆನ್ನವರ ಹಾಗೂ ಶಾರದಾ ಶಿನಗಾರಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಾಗೃತ ಹಾಗೂ ಉಸ್ತುವಾರಿ ಸಮಿತಿ ಸದಸ್ಯರಾದ ಕಲ್ಮೇಶ್ ಹಾದಿಮನಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ವೆಂಕಟೇಶ್ ಸಗಬಾಳ, ಹಾಪ್ ಕಾಮ್ಸ್ ಉಪಾಧ್ಯಕ್ಷರಾದ ಅರ್ಜುನ್ ಪತ್ರೇನ್ನವರ, ಬೈಲಹೊಂಗಲದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ. ಬಸವರಾಜ ತಲ್ಲೂರು ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಹಾದೇವ ಹರಿಜನ ಉಪಸ್ಥಿತರಿದ್ದರು.
ಅವರೊಂದಿಗೆ ಶಂಕರ ದೊಡಮನಿ, ಹಣಮಂತ ಮಾರಡಗಿ, ಮೈಲಾರಿ ಬೆಟಗೇರಿ, ಶಿವು ಪೂಜಾರ, ಮಹಮ್ಮದ ಯಲಿಗಾರ, ಪಾಂಡು ಬಡಕಲಿ, ಚನ್ನಬಸಯ್ಯ ಹಿರೇಮಠ ಸೇರಿದಂತೆ ಹಲವರು ಪಾಲ್ಗೊಂಡು ಸಂಸ್ಥೆಯ ಮುಂದಿನ ಹಾದಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಯಶಸ್ಸಿಗೆ ಸಂಸ್ಥೆಯ ಖಜಾಂಚಿ ಶಿಲ್ಪಾ ರವಿಕುಮಾರ ಕಂಪ್ಲಿ, ಸಹ ಕಾರ್ಯದರ್ಶಿಗಳಾದ ಶ್ರೀಮತಿ ರೂಪಿಣಿ ಪ್ರಶಾಂತ್ ಹರಿಣಿ, ಸದಸ್ಯರಾದ ಕುಮಾರಿ ಸೌಮ್ಯ ಸೊಂಟಕ್ಕಿ, ಶ್ರೀಮತಿ ಕೀರ್ತಿ ಜ್ಯೋತಿಬಾ ಶಿನಗಾರಿ, ಕಾಶಪ್ಪ ಮಾದರ, ಅಶ್ವಿನಿ ಸಾಗರ್ ಹರಿಣಿ ಹಾಗೂ ಜಗದೀಶ ಮಾಂಗೊಂಡಿ ಸೇರಿದಂತೆ ಪದಾಧಿಕಾರಿಗಳು ಶ್ರಮಿಸಿದರು. ಸಮಾರಂಭವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದ್ದಕ್ಕೆ ಸಂಸ್ಥೆಯ ಎಲ್ಲಾ ಸದಸ್ಯರು ಹರ್ಷ ವ್ಯಕ್ತಪಡಿಸಿದರು.

