
ಚೆನ್ನೈ: ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ದಶಕಗಳ ಕಾಲ ನಡೆದಿದ್ದ ದ್ರಾವಿಡ ಪಕ್ಷಗಳ ಏಕಸ್ವಾಮ್ಯಕ್ಕೆ ತೆರೆ ಬಿದ್ದಿದ್ದು, ನಾಳೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಲಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ವಿಜಯ್ ನೇತೃತ್ವದ ಟಿವಿಕೆ, ನಾಳೆ ರಾಜ್ಯಪಾಲರ ಮುಂದೆ ತನ್ನ ಸಂಖ್ಯಾಬಲವನ್ನು ಅಧಿಕೃತವಾಗಿ ಸಾಬೀತುಪಡಿಸಿ ಸರ್ಕಾರ ರಚನೆ ಮಾಡಲಿದೆ.
ವಿಜ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದರು. ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆಯಿದ್ದರೂ, ಕಾಂಗ್ರೆಸ್ ಹಾಗೂ ಎಡಪಕ್ಷಗಳು ವಿಜಯ್ ಅವರ ನಾಯಕತ್ವಕ್ಕೆ ಬೆಂಬಲ ಘೋಷಿಸಿವೆ. ಇದರಿಂದಾಗಿ ವಿಜಯ್ ಅವರ ಸಂಖ್ಯಾಬಲವು ಮ್ಯಾಜಿಕ್ ನಂಬರ್ ದಾಟಿದ್ದು, ಶುಕ್ರವಾರ ಸಂಜೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ರಾಜ್ಯಪಾಲರು ಎಲ್ಲ ಬೆಂಬಲ ಪತ್ರಗಳನ್ನು ಪರಿಶೀಲಿಸಿ ಸರ್ಕಾರ ರಚನೆಗೆ ಅಧಿಕೃತ ಆಹ್ವಾನ ನೀಡಿದ್ದಾರೆ.
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಚೆನ್ನೈನ ಜವಾಹರಲಾಲ್ ನೆಹರು ಇಂಡೋರ್ ಸ್ಟೇಡಿಯಂ ಸಜ್ಜಾಗಿದ್ದು, ನಾಳೆ ಅದ್ಧೂರಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಡಿಎಂಕೆ ಮತ್ತು ಎಐಎಡಿಎಂಕೆಗಳಂತಹ ಬಲಾಢ್ಯ ಪಕ್ಷಗಳ ನಡುವೆ ಮೂರನೇ ಪರ್ಯಾಯವಾಗಿ ಉದಯಿಸಿದ ವಿಜಯ್, ಈಗ ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿಯುತ್ತಿರುವುದು ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಹಾಗೂ ಬೆಂಬಲಿಗರು ರಾಜಧಾನಿಯತ್ತ ಧಾವಿಸುತ್ತಿದ್ದು, ಇಡೀ ತಮಿಳುನಾಡು ನಾಳಿನ ವಿಜಯೋತ್ಸವಕ್ಕಾಗಿ ಕಾತರದಿಂದ ಕಾಯುತ್ತಿದೆ.

