ಧಾರವಾಡ: ನಗರದ ಕೆಸಿಡಿ ಕಾಲೇಜು ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳವು ನಿರುದ್ಯೋಗಿ ಯುವಕ-ಯುವತಿಯರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಒಟ್ಟು 719 ಅಭ್ಯರ್ಥಿಗಳು ವಿವಿಧ ಕಂಪನಿಗಳಿಗೆ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಈ ಮೇಳದಲ್ಲಿ ಒಟ್ಟು 3,085 ಅಭ್ಯರ್ಥಿಗಳು ಪಾಲ್ಗೊಂಡು ತಮ್ಮ ಅದೃಷ್ಟ ಪರೀಕ್ಷಿಸಿಕೊಂಡರು.
ಐಟಿ, ಉತ್ಪಾದನಾ ಕ್ಷೇತ್ರ, ಮಾರಾಟ, ಬ್ಯಾಂಕಿಂಗ್ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಒಟ್ಟು 122 ಖ್ಯಾತ ಕಂಪನಿಗಳು ಮೇಳದಲ್ಲಿ ಭಾಗವಹಿಸಿ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಿದವು. ಪ್ರಾಥಮಿಕ ಹಂತದ ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಬಳಿಕ 1,253 ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಇವರ ಪೈಕಿ ಅರ್ಹತೆ ಮತ್ತು ಕೌಶಲದ ಆಧಾರದ ಮೇಲೆ 719 ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿ ಸ್ಥಳದಲ್ಲಿಯೇ ಆಫರ್ ಲೇಟರ್ (ನೇಮಕಾತಿ ಪತ್ರ) ನೀಡಲಾಯಿತು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

