
ರಾಣೇಬೆನ್ನೂರು: ತಾಲೂಕಿನ ಉಕ್ಕುಂದ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಫೆಬ್ರವರಿ 24 ರಿಂದ ಫೆಬ್ರವರಿ 27 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 24 ರಂದು ಬೆಳಿಗ್ಗೆ 6 ಗಂಟೆಗೆ ನಂದಿಧ್ವಜ ಸ್ಥಾಪನೆ ಮತ್ತು ಕಂಕಣ ಕಟ್ಟುವ ಕಾರ್ಯಕ್ರಮ ನೆರವೇರಲಿದೆ. ಇದೇ ವೇಳೆ ನೂತನ ಪುಷ್ಪ ರಥೋತ್ಸವದ ನಿಮಿತ್ತ ವಿಶೇಷ ಹೋಮ-ಹವನ ಹಾಗೂ ರಥಶಾಂತಿ ಪೂಜೆಗಳು ಜರುಗಲಿವೆ. ಅಂದು ಸಂಜೆ 7:30 ಕ್ಕೆ ಆವರಗೋಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನೂತನ ಪುಷ್ಪ ರಥೋತ್ಸವಕ್ಕೆ ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ.
ಫೆಬ್ರವರಿ 26 ರಂದು ಬೆಳಿಗ್ಗೆ 11 ಗಂಟೆಗೆ ಪುಷ್ಪ ರಥೋತ್ಸವವು ಸಂಭ್ರಮದಿಂದ ಜರುಗಲಿದ್ದು, ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿ 27 ರಂದು ಬೆಳಿಗ್ಗೆ ಗುಗ್ಗಳ ಕಾರ್ಯಕ್ರಮ ಹಾಗೂ ಅಂದು ಸಂಜೆ 4 ಗಂಟೆಗೆ ವೈಭವದ ಮಹಾ ರಥೋತ್ಸವ ಜರುಗಲಿದೆ. ಜಾತ್ರೆಯ ವಿಶೇಷ ಆಕರ್ಷಣೆಯಾಗಿ ಫೆಬ್ರವರಿ 28 ರಿಂದ ಮಾರ್ಚ್ 2 ರವರೆಗೆ ಬೈಲು ಜಂಗೀ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿಯು ತಿಳಿಸಿದೆ.

