ತರ್ಲಘಟ್ಟ: ಹುಲಗೂರ-ಶಿಗ್ಗಾವ ರಸ್ತೆ ಪಕ್ಕದ ಜಮೀನಿನಲ್ಲಿ ಅಗ್ನಿ ಅವಘಡ; ಆರು ಮೇವಿನ ಬಣವೆಗಳು ಭಸ್ಮ

Spread the love

ಕುಂದಗೋಳ: ತಾಲೂಕಿನ ತರ್ಲಘಟ್ಟ ಗ್ರಾಮದ ವ್ಯಾಪ್ತಿಯಲ್ಲಿರುವ ಹುಲಗೂರ-ಶಿಗ್ಗಾವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಇಂದು ಸಂಜೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ರೈತರು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೇವು ಹಾಗೂ ಬೆಳೆ ಬೆಂಕಿಗಾಹುತಿಯಾಗಿದೆ. ಸುಮಾರು 5 ಗಂಟೆ ವೇಳೆಗೆ ಕಾಣಿಸಿಕೊಂಡ ಈ ಬೆಂಕಿಯು ಕಿಡಿಗೇಡಿಗಳ ದುಷ್ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.

​ಗ್ರಾಮದ ರೈತರಾದ ಸಿದ್ದಲಿಂಗಪ್ಪ ಅಂಗಡಿ, ಬಸಪ್ಪ ಹಸಬಿ ಹಾಗೂ ಗುರುಸಿದ್ದಪ್ಪ ದ್ಯಾವನೂರ ಎಂಬುವವರಿಗೆ ಸೇರಿದ ಆರು ಗೋವಿನಜೋಳದ ಹೊಟ್ಟಿನ ಬಣವೆಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಬಣವೆಗಳ ಪಕ್ಕದಲ್ಲೇ ಇದ್ದ ಬಸಪ್ಪ ಮುಳಗುಂದ ಅವರಿಗೆ ಸೇರಿದ ತೊಗರಿ ಬೆಳೆಗೂ ಬೆಂಕಿ ವ್ಯಾಪಿಸಿದ್ದು, ಅಪಾರ ಹಾನಿ ಸಂಭವಿಸಿದೆ. ಈ ಅನಿರೀಕ್ಷಿತ ಅವಘಡದಿಂದ ಅಂದಾಜು ಒಂದು ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಕೃಷಿ ಉತ್ಪನ್ನಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ.

​ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಹುಬ್ಬಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ಗ್ರಾಮಸ್ಥರ ಸಹಕಾರದೊಂದಿಗೆ ಬೆಂಕಿ ಮತ್ತಷ್ಟು ಹರಡದಂತೆ ನಿಯಂತ್ರಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದರು. ಆದರೂ ಒಣಗಿದ ಮೇವಾಗಿದ್ದರಿಂದ ಕ್ಷಣಾರ್ಧದಲ್ಲೇ ಬಹುತೇಕ ಭಾಗ ಬೂದಿಯಾಗಿದೆ.

​ಈ ಕುರಿತು ‘ಮಾಯ್ ಪಬ್ಲಿಕ್ ಸಮಾಚಾರ’ ವಾಹಿನಿಯೊಂದಿಗೆ ಮಾತನಾಡಿದ ಬಾಧಿತ ರೈತರು, ಇದು ಕಿಡಿಗೇಡಿಗಳು ಎಸಗಿರುವ ಕೃತ್ಯವೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ವರ್ಷವಿಡೀ ಕಷ್ಟಪಟ್ಟು ದನಕರುಗಳಿಗಾಗಿ ಸಂಗ್ರಹಿಸಿದ್ದ ಮೇವು ಕಣ್ಣೆದುರೇ ನಾಶವಾಗಿರುವುದು ರೈತ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದೆ. ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *