
ನವಲಗುಂದ: ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾದ ಸ್ವಚ್ಛತಾ ಆಂದೋಲನ ಹಾಗೂ ಕುಡಿಯುವ ನೀರಿನ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಈ ಕಾಮಗಾರಿಗಳ ಪ್ರಗತಿಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ವೀಕ್ಷಿಸಿದರು.
ಗ್ರಾಮದ ಪ್ರಮುಖ ಜಲಮೂಲವಾಗಿರುವ ಕೆರೆಯನ್ನು ಅಭಿವೃದ್ಧಿಪಡಿಸುವ ಮೂಲಕ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಅಭಾವವನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಗ್ರಾಮದ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ಪರಿಸರ ಸಂರಕ್ಷಣೆ ಮತ್ತು ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಕಾಮಗಾರಿಗಳನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ಗಿರೀಶ್ ದೇವರಡ್ಡಿ, ಫಕ್ಕೀರೇಶ ಪಡೆಸೂರ್, ಶಂಕ್ರಪ್ಪ ಬಾಗೂರು, ಚಳ್ಳಪ್ಪ ಜಂಗಣ್ಣರ್, ಗುರುಸಿದ್ದಪ್ಪ ಪೂಜಾರ್, ಶಿವಾನಂದ ಗುಡಶಲಮಾಣಿ, ಚಳ್ಳಪ್ಪ ಕಲ್ಲಿ, ಮಾರುತಿ ಪೂಜಾರ್ ಸೇರಿದಂತೆ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

