
ಲಂಡನ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆ ದೇಶದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಮತ್ತು ಜೈಲಿನಲ್ಲಿ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ವಿಶ್ವದ ಖ್ಯಾತನಾಮ ಕ್ರಿಕೆಟ್ ನಾಯಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದ ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್, ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಸೇರಿದಂತೆ ಅಂತರಾಷ್ಟರೆಯ ಕ್ರಿಕೆಟ್‌ನ 14 ಮಂದಿ ದಿಗ್ಗಜ ಮಾಜಿ ನಾಯಕರು ಒಗ್ಗೂಡಿ ಪಾಕಿಸ್ತಾನ ಸರ್ಕಾರಕ್ಕೆ ವಿಶೇಷ ಮನವಿಯೊಂದನ್ನು ಸಲ್ಲಿಸಿದ್ದಾರೆ.
ಪಾಕಿಸ್ತಾನಕ್ಕೆ 1992ರ ವಿಶ್ವಕಪ್ ಗೆದ್ದುಕೊಟ್ಟ ಇಮ್ರಾನ್ ಖಾನ್ ಅವರ ಕ್ರೀಡಾ ಸಾಧನೆಯನ್ನು ಸ್ಮರಿಸಿರುವ ನಾಯಕರು, ಅವರು ಕೇವಲ ಒಬ್ಬ ಆಟಗಾರನಲ್ಲ, ಬದಲಾಗಿ ವಿಶ್ವ ಕ್ರಿಕೆಟ್‌ನ ಅಪ್ರತಿಮ ನಾಯಕ ಮತ್ತು ಸ್ಫೂರ್ತಿಯ ಚಿಲುಮೆ ಎಂದು ಬಣ್ಣಿಸಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಇಮ್ರಾನ್ ಖಾನ್ ಅವರು ಜೈಲಿನಲ್ಲಿ ಅನುಭವಿಸುತ್ತಿರುವ ಕಠಿಣ ಪರಿಸ್ಥಿತಿಗಳು ಮತ್ತು ಇತ್ತೀಚಿನ ವರದಿಗಳ ಪ್ರಕಾರ ಅವರ ದೃಷ್ಟಿ ಸಾಮರ್ಥ್ಯ ಕುಸಿಯುತ್ತಿರುವ ಬಗ್ಗೆ ಈ ದಿಗ್ಗಜ ಆಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ರಾಜಕೀಯ ಸಿದ್ಧಾಂತಗಳು ಏನೇ ಇರಲಿ, ಪ್ರಜಾಪ್ರಭುತ್ವದ ಮೂಲಕ ದೇಶದ ಅತ್ಯುನ್ನತ ಸ್ಥಾನಕ್ಕೇರಿದ ವ್ಯಕ್ತಿಗೆ ಕನಿಷ್ಠ ಮಾನವೀಯ ಗೌರವ ನೀಡಬೇಕು ಎಂಬುದು ಈ ನಾಯಕರ ಒಕ್ಕೊರಲ ಒತ್ತಾಯವಾಗಿದೆ.
ಇಮ್ರಾನ್ ಖಾನ್ ಅವರಿಗೆ ತಕ್ಷಣವೇ ಅವರು ಇಚ್ಛಿಸುವ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು ಹಾಗೂ ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ಗೌರವಯುತವಾದ ಜೈಲು ವಾತಾವರಣವನ್ನು ಕಲ್ಪಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಅಲ್ಲದೆ, ಅವರ ಕುಟುಂಬದ ಸದಸ್ಯರಿಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಮತ್ತು ನ್ಯಾಯಾಲಯದ ಪ್ರಕ್ರಿಯೆಗಳು ಯಾವುದೇ ಅಡೆತಡೆಯಿಲ್ಲದೆ ಪಾರದರ್ಶಕವಾಗಿ ನಡೆಯಬೇಕು ಎಂದು ನಾಯಕರು ಮನವಿ ಮಾಡಿದ್ದಾರೆ. ಕ್ರೀಡಾಂಗಣದ ಒಳಗಿನ ಪೈಪೋಟಿ ಆಟ ಮುಗಿದ ನಂತರ ಕೊನೆಗೊಳ್ಳುತ್ತದೆ, ಆದರೆ ಪರಸ್ಪರ ಗೌರವ ಶಾಶ್ವತವಾಗಿರುತ್ತದೆ ಎಂಬ ಕ್ರೀಡಾ ಸ್ಫೂರ್ತಿಯನ್ನು ಎತ್ತಿ ಹಿಡಿಯಲು ಈ ಪತ್ರದ ಮೂಲಕ ಪ್ರಯತ್ನಿಸಲಾಗಿದೆ.
ಈ ಐತಿಹಾಸಿಕ ಮನವಿಗೆ ಭಾರತದ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಸೇರಿದಂತೆ ಆಸ್ಟ್ರೇಲಿಯಾದ ಅಲನ್ ಬಾರ್ಡರ್, ಇಯಾನ್ ಚಾಪೆಲ್, ಸ್ಟೀಫನ್ ವಾ, ಇಂಗ್ಲೆಂಡ್‌ನ ಮೈಕಲ್ ಅಥರ್ಟನ್, ಡೇವಿಡ್ ಗೋವರ್, ನಾಸಿರ್ ಹುಸೇನ್ ಮತ್ತು ವೆಸ್ಟ್ ಇಂಡೀಸ್‌ನ ಸರ್ ಕ್ಲೈವ್ ಲಾಯ್ಡ್ ಸೇರಿದಂತೆ ಅನೇಕ ದಿಗ್ಗಜರು ಸಹಿ ಹಾಕಿದ್ದಾರೆ. ಸಂಪೂರ್ಣವಾಗಿ ಮಾನವೀಯ ನೆಲೆಯಲ್ಲಿ ಮತ್ತು ಕ್ರೀಡಾ ಮನೋಭಾವದಿಂದ ಈ ಮನವಿ ಮಾಡಲಾಗಿದ್ದು, ಪಾಕಿಸ್ತಾನದ ಅಧಿಕಾರಿಗಳು ಈ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ವಿಶ್ವ ಕ್ರಿಕೆಟ್ ಸಮುದಾಯ ಎದುರು ನೋಡುತ್ತಿದೆ.

