ಧಾರವಾಡ: ನಗರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಚೇರಿಗಳ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರುವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ಒಟ್ಟು 18 ಮರಗಳು ಹಾಗೂ 7 ಮರದ ಟೊಂಗೆಗಳನ್ನು ತೆರವುಗೊಳಿಸುವ ಸಂಬಂಧ ಫೆಬ್ರವರಿ 10 ರಂದು ಮಧ್ಯಾಹ್ನ 3 ಗಂಟೆಗೆ ಧಾರವಾಡದ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಮರ ಸಂರಕ್ಷಣಾ ಕಾಯ್ದೆ 1976 ರ ಅನ್ವಯ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಈ ಮರಗಳನ್ನು ಗುರುತಿಸಲಾಗಿದೆ. ಈ ಮರಗಳ ತೆರವಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಥವಾ ಸಂಘ-ಸಂಸ್ಥೆಗಳು ಏನಾದರೂ ಆಕ್ಷೇಪಣೆ ಅಥವಾ ತಕರಾರುಗಳನ್ನು ಹೊಂದಿದ್ದಲ್ಲಿ, ಅವುಗಳನ್ನು ಲಿಖಿತ ರೂಪದಲ್ಲಿ ಫೆಬ್ರವರಿ 7 ರ ಒಳಗಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ತಕರಾರು ಪತ್ರಗಳನ್ನು ಧಾರವಾಡ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಅಥವಾ ಕೆ.ಸಿ. ಪಾರ್ಕ್ ಎದುರಿರುವ ಅರಣ್ಯ ಸಂಕೀರ್ಣದಲ್ಲಿರುವ ಮರ ಅಧಿಕಾರಿಯವರಿಗೆ ಸಲ್ಲಿಸಬಹುದಾಗಿದೆ. ಹರಾಜಿನಲ್ಲಿ ಭಾಗವಹಿಸುವವರು ನಿಗದಿತ ಸಮಯಕ್ಕೆ ಹಾಜರಿರಬೇಕು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

