ನವಲಗುಂದ, ಅಣ್ಣಿಗೇರಿ 22 ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳ ನೇಮಕ: ಜಿಲ್ಲಾಧಿಕಾರಿಗಳ ಅಧಿಸೂಚನೆ

Spread the love

ನವಲಗುಂದ: ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕುಗಳ ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಸುಗಮ ನಿರ್ವಹಣೆಗಾಗಿ ಒಟ್ಟು 22 ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಅಧಿಸೂಚನೆ ಹೊರಡಿಸಿದ್ದಾರೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ಆರ್. ಬಡೇಖಾನವರ ತಿಳಿಸಿದ್ದಾರೆ.

​ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರನ್ವಯ ಈ ನೇಮಕಾತಿ ಮಾಡಲಾಗಿದ್ದು, ಚುನಾಯಿತ ಮಂಡಳಿಯ ಅವಧಿ ಮುಗಿದ ದಿನದಿಂದ ಹೊಸದಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗುವವರೆಗೆ ಈ ಅಧಿಕಾರಿಗಳು ಗ್ರಾಮ ಪಂಚಾಯತಿಯ ಸರ್ವ ಅಧಿಕಾರಗಳನ್ನು ಚಲಾಯಿಸಲಿದ್ದಾರೆ. ವಿಶೇಷವೆಂದರೆ ಈ ಆದೇಶವು ‘ಹುದ್ದೆವಾರು’ ಆಗಿರುವುದರಿಂದ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವರ್ಗಾವಣೆಯಾದರೂ ಆ ಹುದ್ದೆಗೆ ಬರುವ ಹೊಸ ಅಧಿಕಾರಿಗಳೇ ಆಡಳಿತಾಧಿಕಾರಿಯಾಗಿ ಮುಂದುವರಿಯಲಿದ್ದಾರೆ.

​ಅಳಗವಾಡಿ ಗ್ರಾಮ ಪಂಚಾಯತಿಗೆ ನೀರಾವರಿ ಇಲಾಖೆಯ ತಾಂತ್ರಿಕ ಸಹಾಯಕರು, ಜಾವೂರ ಗ್ರಾಮ ಪಂಚಾಯತಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು, ಗುಮ್ಮಗೋಳ ಗ್ರಾಮ ಪಂಚಾಯತಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಶಿರೂರ ಗ್ರಾಮ ಪಂಚಾಯತಿಗೆ ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.

​ಅದೇ ರೀತಿ, ಮೊರಬ ಗ್ರಾಮ ಪಂಚಾಯತಿಗೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು, ಶಿರಕೋಳ ಗ್ರಾಮ ಪಂಚಾಯತಿಗೆ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ತಿರ್ಲಾಪೂರ ಮತ್ತು ನಾಯಕನೂರ ಗ್ರಾಮ ಪಂಚಾಯತಿಗಳಿಗೆ ನೀರಾವರಿ ಇಲಾಖೆಯ ವಿವಿಧ ಉಪವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಬೆಳಹಾರ ಗ್ರಾಮ ಪಂಚಾಯತಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಹಾಗೂ ತಡಹಾಳ ಮತ್ತು ಗುಡಿಸಾಗರ ಗ್ರಾಮ ಪಂಚಾಯತಿಗಳಿಗೆ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರನ್ನು ನೇಮಕ ಮಾಡಲಾಗಿದೆ.

​ಹಾಳಕುಸುಗಲ್ಲ ಗ್ರಾಮ ಪಂಚಾಯತಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಹೆಬ್ಬಾಳ ಗ್ರಾಮ ಪಂಚಾಯತಿಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಹಾಗೂ ಬೆಳವಟಗಿ ಗ್ರಾಮ ಪಂಚಾಯತಿಗೆ ಏಪ್ರಿಲ್ 20ರಿಂದ ಅನ್ವಯವಾಗುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರನ್ನು ಆಡಳಿತಾಧಿಕಾರಿಯನ್ನಾಗಿ ಜಿಲ್ಲಾಧಿಕಾರಿಗಳು ನೇಮಿಸಿದ್ದಾರೆ. 2026-31ರ ಅವಧಿಗಾಗಿ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವವರೆಗೆ ಈ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಬಡೇಖಾನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *