ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಸ್ತಾಕ್: ಸಿಎಂ ಸಿದ್ದರಾಮಯ್ಯ ಘೋಷಣೆ

Spread the love

ಬೆಂಗಳೂರು: ಈ ಬಾರಿ ಮೈಸೂರು ದಸರಾವನ್ನು ಯಾರು ಉದ್ಘಾಟಿಸುತ್ತಾರೆ ಎಂಬ ಕಳೆದ ಕೆಲ ದಿನಗಳ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತೆರೆ ಎಳೆದಿದ್ದಾರೆ. ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಸ್ತಾಕ್ ಅವರೇ ಈ ಬಾರಿಯ ನಾಡಹಬ್ಬವನ್ನು ಉದ್ಘಾಟಿಸಲಿದ್ದಾರೆ ಎಂದು ಶುಕ್ರವಾರ ಅಧಿಕೃತವಾಗಿ ಘೋಷಿಸಿದರು.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, “ಮೈಸೂರು ಜಿಲ್ಲಾಡಳಿತವು ಬಾನು ಮುಸ್ತಾಕ್ ಅವರಿಗೆ ಗೌರವದ ಆಹ್ವಾನ ನೀಡಲಿದೆ. ‘ಎದೆಯ ಹಣತೆ’ ಕೃತಿಗೆ ಬೂಕರ್ ಪ್ರಶಸ್ತಿ ಪಡೆದಿರುವ ಅವರು ರೈತ ಸಂಘ, ಕನ್ನಡ ಚಳವಳಿ ಸೇರಿದಂತೆ ಹಲವು ಹೋರಾಟಗಳಲ್ಲಿ ಪಾಲ್ಗೊಂಡ ಪ್ರಗತಿಪರ ಚಿಂತಕಿ” ಎಂದು ಹೇಳಿದರು. ಈ ಬಾರಿ ಶಾಸ್ತ್ರೋಕ್ತವಾಗಿ ದಸರಾ ಹನ್ನೊಂದು ದಿನಗಳ ಕಾಲ ನಡೆಯಲಿದ್ದು, ಅಕ್ಟೋಬರ್ 2ರಂದು ವಿಜಯದಶಮಿ ಇರಲಿದೆ ಎಂದು ತಿಳಿಸಿದರು.

ಸೋನಿಯಾ ಗಾಂಧಿ ಉದ್ಘಾಟನೆ ಸುದ್ದಿ ಕೇವಲ ಕಾಲ್ಪನಿಕ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಈ ಬಾರಿಯ ದಸರಾ ಉದ್ಘಾಟಿಸಲಿದ್ದಾರೆ ಎಂಬ ಸುದ್ದಿಯನ್ನು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ತಳ್ಳಿ ಹಾಕಿದರು. “ಅದು ಕೇವಲ ಕಾಲ್ಪನಿಕ ಮತ್ತು ಸತ್ಯಕ್ಕೆ ದೂರವಾದದ್ದು. ಆ ರೀತಿ ಯಾವುದೇ ಉದ್ದೇಶವಾಗಲೀ ಅಥವಾ ಪ್ರಸ್ತಾವನೆಯಾಗಲಿ ಸರ್ಕಾರದ ಮುಂದೆ ಇರಲಿಲ್ಲ” ಎಂದು ಸ್ಪಷ್ಟಪಡಿಸಿದರು.
ವೈಮಾನಿಕ ಪ್ರದರ್ಶನಕ್ಕೆ ಅನುಮತಿ
ದಸರಾ ಮಹೋತ್ಸವದಲ್ಲಿ ವೈಮಾನಿಕ ಪ್ರದರ್ಶನಕ್ಕೆ ಅನುಮತಿ ದೊರೆತಿದೆ.

ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಆಹ್ವಾನ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Leave a Reply

Your email address will not be published. Required fields are marked *