ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪುನರ್ವಸತಿ ಕಾರ್ಯಕರ್ತರು ಶ್ರಮಿಸಲಿ: ಶೇಖರಗೌಡ ರಾಮತ್ನಾಳ

Spread the love

ಧಾರವಾಡ: ಸಮಾಜದ ಭವಿಷ್ಯವಾಗಿರುವ ಮಕ್ಕಳ ಹಕ್ಕುಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪುನರ್ವಸತಿ ಕಾರ್ಯಕರ್ತರು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹೆಚ್ಚಿನ ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ತಿಳಿಸಿದರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬುಧವಾರ ಆಯೋಜಿಸಲಾಗಿದ್ದ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಗೆ ‘ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆ’ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 18 ವರ್ಷದೊಳಗಿನ ಮಕ್ಕಳ ಮಾಹಿತಿ ಪಡೆದು, ಶಾಲೆಯಿಂದ ಹೊರಗುಳಿದ ಅಥವಾ ಯು.ಡಿ.ಐ.ಡಿ ಕಾರ್ಡ್ ಸೌಲಭ್ಯದಿಂದ ವಂಚಿತರಾದ ವಿಶೇಷ ಚೇತನ ಮಕ್ಕಳ ಮೇಲೆ ನಿಗಾ ಇಡಬೇಕು. ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ತಕ್ಷಣವೇ 1098 ಅಥವಾ 112 ಸಹಾಯವಾಣಿಗೆ ಮಾಹಿತಿ ನೀಡುವ ಮೂಲಕ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಬೇಕು ಎಂದು ಅವರು ಕರೆ ನೀಡಿದರು.

​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಅವರು ಮಾತನಾಡಿ, ಮಹಿಳೆಯರು, ಮಕ್ಕಳು ಹಾಗೂ ನಿರ್ಗತಿಕರಿಗೆ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಭಾರತವನ್ನು ಬಾಲ್ಯ ವಿವಾಹ ಮುಕ್ತವಾಗಿಸಲು ಹಾಗೂ ಪೋಕ್ಸೋ ಕಾಯ್ದೆಯಡಿ ಜಾಗೃತಿ ಮೂಡಿಸಲು ಕಾರ್ಯಕರ್ತರು ಸಹಕರಿಸಬೇಕು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಮಾತನಾಡಿ, ವಲಸೆ ಕಾರ್ಮಿಕರ ಮಕ್ಕಳ ರಕ್ಷಣೆಯ ಬಗ್ಗೆ ಹೆಮ್ಮೆಯ ಕೆಲಸಗಳು ನಡೆಯುತ್ತಿದ್ದು, ಹಕ್ಕುಗಳ ಉಲ್ಲಂಘನೆಯಾದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಲು ಸೂಚಿಸಿದರು.

​ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸವಿತಾ ಕಾಳೆ ಅವರು ವಿಶೇಷ ಚೇತನ ಮಕ್ಕಳ ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆಯ ಮಹತ್ವದ ಬಗ್ಗೆ ವಿವರಿಸಿದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಹೆಚ್.ಹೆಚ್. ಕುಕನೂರ ಅವರು ಮಹಿಳಾ ಸಹಾಯವಾಣಿ 181 ಮತ್ತು ‘ಅಕ್ಕಪಡೆ’ಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು. ಕೊಪ್ಪಳದ ಯುನಿಸೆಫ್ ಯೋಜನಾ ವ್ಯವಸ್ಥಾಪಕ ಹರೀಶ ಜೋಗಿ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ವಾಯ್. ಪಾಟೀಲ್, ಸದಸ್ಯರಾದ ನೂರಜಹಾನ ಕಿಲ್ಲೇದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಎಂ.ಕೆ. ತಹಶಿಲ್ದಾರ ಕಾರ್ಯಕ್ರಮ ನಿರೂಪಿಸಿದರು ಮತ್ತು ವಿಶಾಲಾ ಕಾನಪೇಟ ವಂದಿಸಿದರು.

Leave a Reply

Your email address will not be published. Required fields are marked *