ಸಂವಿಧಾನವು ದೇಶದ ಮೌಲ್ಯಗಳನ್ನು ಸಾಕಾರಗೊಳಿಸುವ ಪವಿತ್ರ ಗ್ರಂಥ: ಸವಿತಾ ಚಿಕ್ಕಣ್ಣವರ

Spread the love

ನವಲಗುಂದ: ಭಾರತದ ಸಂವಿಧಾನವು ಕೇವಲ ಕಾನೂನುಗಳ ಸಂಕಲನವಲ್ಲ, ಅದು ನಮ್ಮ ದೇಶದ ಮೌಲ್ಯಗಳು, ತತ್ವಗಳು ಮತ್ತು ಆಡಳಿತಾತ್ಮಕ ಚೌಕಟ್ಟನ್ನು ಸಾಕಾರಗೊಳಿಸುವ ಪವಿತ್ರ ಗ್ರಂಥವಾಗಿದೆ ಎಂದು ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಸವಿತಾ ಚಿಕ್ಕಣ್ಣವರ ಅಭಿಪ್ರಾಯಪಟ್ಟರು.

​ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಜಗತ್ತಿನ ಅತಿ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಸಂವಿಧಾನವು ದೇಶದ ಬಲಿಷ್ಠತೆಗೆ ಅಡಿಪಾಯವಾಗಿದೆ. ನೂರಾರು ಹೋರಾಟಗಾರರು ಬಲಿದಾನ ನೀಡಿ ತಂದುಕೊಟ್ಟ ಸ್ವಾತಂತ್ರ್ಯವನ್ನು ರಕ್ಷಿಸಲು ಮೌಲ್ಯಯುತವಾದ ಸಂವಿಧಾನದ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಕೊಡುಗೆಯಿಂದಾಗಿ ಅವರು ಎಂದಿಗೂ ಇತಿಹಾಸ ಪುರುಷರಾಗಿ ನೆನಪಿನಲ್ಲಿ ಉಳಿಯುತ್ತಾರೆ ಎಂದು ಸ್ಮರಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದ ಪ್ರಾಂಶುಪಾಲ ಡಾ. ಎಂ. ಬಿ. ಬಾಗಡಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ವಿಶೇಷವಾಗಿ ಕಿತ್ತೂರು ನಾಡಿನ ವೀರ ಪುತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಕೆಚ್ಚೆದೆಯ ಹೋರಾಟ ಇಂದಿನ ಯುವಪೀಳಿಗೆಗೆ ಸದಾ ಮಾದರಿಯಾಗಿದೆ. ಅಂಬೇಡ್ಕರ್ ಅವರು ರಚಿಸಿ ನೀಡಿರುವ ಸಂವಿಧಾನವನ್ನು ಗೌರವಿಸುವುದು ಮತ್ತು ಪಾಲಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ ಎಂದರು.

​ಶ್ರೀ ಬಿ. ವಿ. ಏಣಗಿ ಸ್ವಾಗತಿಸಿದರು, ಡಾ. ಸಂತೋಷ ಹುಬ್ಬಳ್ಳಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀ ಗಣೇಶ್ ಧೋಂಗಡಿ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪ್ರೊ. ಐ. ಬಿ. ಸಾತಿಹಾಳ, ಡಾ. ಪ್ರಸನ್ನ, ಡಾ. ಕುರಡೇಕರ್, ಗಂಗಾಧರ್, ಶ್ರೀಧರ್ ಲೋನಕರ್, ಮಂಜುನಾಥ್, ಗಡಾದ, ಡಾ. ಚೈತ್ರಾ, ಡಾ. ಮಧುಶ್ರೀ, ಬ್ಯಾಹಟ್ಟಿ, ಡಾ. ಪ್ರವೀಣ ದೊಡಮನಿ, ಸಮೀರ್, ಪ್ರತಿಭಾ ಹಾಗೂ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *