ಧಾರವಾಡ, ಜ. 22: ಬಾಲ್ಯವಿವಾಹ ಪಿಡುಗನ್ನು ಸಂಪೂರ್ಣವಾಗಿ ತಡೆಗಟ್ಟಿ, ‘ಶೂನ್ಯ ಸಹಿಷ್ಣುತೆ’ ಸಾಧಿಸಿರುವ ಗ್ರಾಮ ಪಂಚಾಯತ್‌ಗಳನ್ನು ಗುರುತಿಸಿ ಗೌರವಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ 2024-25ನೇ ಸಾಲಿಗೆ ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯತ್ ಪ್ರಶಸ್ತಿಗಾಗಿ ಅರ್ಹ ಪಂಚಾಯತ್‌ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಾಲ್ಯವಿವಾಹ ಮುಕ್ತ ಕರ್ನಾಟಕವನ್ನಾಗಿಸುವ ವಿನೂತನ ಯೋಜನೆಯಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಾಲ್ಯವಿವಾಹದ ವಿಚಾರದಲ್ಲಿ ರಾಜಿ ಇಲ್ಲದ (ಶೂನ್ಯ ಸಹಿಷ್ಣುತೆ) ನಿಲುವು ಹೊಂದಿರುವ ಮತ್ತು ಅದನ್ನು ಪರಿಣಾಮಕಾರಿಯಾಗಿ ತಡೆಗಟ್ಟಿರುವ ಪಂಚಾಯತ್‌ಗಳನ್ನು ಗುರುತಿಸಲಾಗುವುದು. ಪ್ರತಿ ಜಿಲ್ಲೆಯಿಂದ ಆಯ್ಕೆಯಾಗುವ ಒಂದು ಅತ್ಯುತ್ತಮ ಗ್ರಾಮ ಪಂಚಾಯತ್‌ಗೆ 25,000 ರೂಪಾಯಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು.
ಅರ್ಹ ಗ್ರಾಮ ಪಂಚಾಯತ್‌ಗಳು ಸಂಬಂಧಪಟ್ಟ ತಾಲೂಕು ಪಂಚಾಯತ್ ಕಚೇರಿಗಳಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು 2026ರ ಫೆಬ್ರವರಿ 11 ಕೊನೆಯ ದಿನವಾಗಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

