ಧಾರವಾಡ, ಜ. 21: ಧಾರವಾಡ ಜಿಲ್ಲೆ ಹಾಗೂ ಸುತ್ತಮುತ್ತಲಿನ ರೈತರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆಯು ಇಲ್ಲಿನ ಕುಂಬಾಪುರ ಫಾರ್ಮ್ ಆವರಣದಲ್ಲಿರುವ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರದಲ್ಲಿ ‘ಕಿಸಾನ್ ಮಾಲ್’ ಅನ್ನು ಸ್ಥಾಪಿಸಿದ್ದು, ರೈತರಿಗೆ ಅಗತ್ಯವಿರುವ ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತಿದೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಸ್ಥಾಪಿಸಲಾಗಿರುವ ಈ ಕಿಸಾನ್ ಮಾಲ್ನಲ್ಲಿ, ತೋಟಗಾರಿಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಶ್ಯಕವಾದ ಬಿತ್ತನೆ ಬೀಜಗಳು, ರಸಗೊಬ್ಬರಗಳು, ಸಾವಯವ ಗೊಬ್ಬರಗಳು, ನೀರಾವರಿ ಪರಿಕರಗಳು, ಕೃಷಿ ಯಂತ್ರೋಪಕರಣಗಳು ಹಾಗೂ ಸಲಕರಣೆಗಳು ಲಭ್ಯವಿವೆ. ಅಲ್ಲದೆ, ಬೆಳೆಗಳಿಗೆ ತಗಲುವ ರೋಗ ಮತ್ತು ಕೀಟ ಬಾಧೆ ತಡೆಗಟ್ಟಲು ಅಗತ್ಯವಿರುವ ಎಲ್ಲಾ ರೀತಿಯ ಶಿಲೀಂಧ್ರನಾಶಕ ಹಾಗೂ ಕೀಟನಾಶಕಗಳು ಒಂದೇ ಸೂರಿನಡಿ ರಿಯಾಯಿತಿ ದರದಲ್ಲಿ ದೊರೆಯಲಿವೆ.
ಜಿಲ್ಲೆಯ ರೈತ ಬಾಂಧವರು ಈ ಕಿಸಾನ್ ಮಾಲ್ನ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರದ ಯೋಜನಾಧಿಕಾರಿಗಳು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಅಲ್ಲದೆ, ದೂರವಾಣಿ ಸಂಖ್ಯೆ 91108 57484 ಮೂಲಕವೂ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

