ಪತ್ರಕರ್ತರು ಸಾಮಾಜಿಕ ಕಾಳಜಿಯೊಂದಿಗೆ ಜವಾಬ್ದಾರಿ ನಿಭಾಯಿಸಲಿ: ಜಿ.‌ಕಾ.ಪ ಸಂ, ಅಧ್ಯಕ್ಷರಾದ ಬಂಡು ಕುಲಕರ್ಣಿಯವರಿಂದ ಕರೆ

Spread the love

ನವಲಗುಂದ: ಪತ್ರಕರ್ತರು ಕೇವಲ ಸುದ್ದಿಗಾರರಾಗದೆ ಸಾಮಾಜಿಕ ಕಾಳಜಿಯೊಂದಿಗೆ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವುದು ಇಂದಿನ ಅಗತ್ಯವಾಗಿದೆ ಎಂದು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಹೇಳಿದರು.

​ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಪತ್ರಕರ್ತ ವೃತ್ತಿಗೆ ತನ್ನದೇ ಆದ ಗೌರವದ ಸ್ಥಾನವಿದೆ. ವರದಿಗಾರರು ಯಾವುದೇ ಆಮಿಷಗಳಿಗೆ ಬಲಿಯಾಗದೆ, ನಿಷ್ಠುರತೆಯಿಂದ ಸತ್ಯದ ಪರವಾಗಿ ವರದಿ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ತಾಲ್ಲೂಕು ಸಂಘವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಿರಂತರವಾಗಿ ಕ್ರಿಯಾಶೀಲವಾಗಿರಬೇಕು. ಇಂತಹ ಸತ್ಕಾರ್ಯಗಳಿಗೆ ಜಿಲ್ಲಾ ಸಂಘವು ಯಾವಾಗಲೂ ಬೆಂಬಲ ನೀಡಲಿದೆ ಎಂದು ಅವರು ಭರವಸೆ ನೀಡಿದರು.

​ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ರಾಜು ವಿಜಾಪೂರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಇದರಿಂದಾಗಿ ನೈಜ ಪತ್ರಕರ್ತರು ಮುಜುಗರ ಅನುಭವಿಸುವಂತಾಗಿದೆ. ನಕಲಿ ಪತ್ರಕರ್ತರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಶೋಷಣೆಗೆ ಒಳಪಡಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ವೃತ್ತಿಯ ಘನತೆಯನ್ನು ಕಾಪಾಡಿಕೊಳ್ಳಲು ಜಿಲ್ಲಾ ಸಂಘವು ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

​ಇದೇ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಇಸ್ಮಾಯಿಲ್ ನದಾಫ, ಕಾರ್ಯದರ್ಶಿ ಈಶ್ವರ ಲಕ್ಕುಂಡಿ ಹಾಗೂ ಖಜಾಂಚಿ ಶಂಕರ ಸುಬೇದಾರಮಠ ಅವರಿಗೆ ಜಿಲ್ಲಾಧ್ಯಕ್ಷ ಬಂಡು ಕುಲಕರ್ಣಿ ಪ್ರಮಾಣ ಪತ್ರ ವಿತರಿಸಿದರು. ಹಿರಿಯ ಪತ್ರಕರ್ತ ಹುಚ್ಚಪ್ಪ ಭೋವಿ ಪ್ರಾಸ್ತಾವಿಕವಾಗಿ ಮಾತನಾಡಿದರು.

​ವೇದಿಕೆಯಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಹೇಮರೆಡ್ಡಿ ಸೈದಾಪೂರ, ಮಹೇಶ ನರೆಗಲ್, ಚಂದ್ರು ಕೊಟಗಿ, ಪುಂಡಲೀಕ ಮುಧೋಳೆ, ಬಾಬಾಜಾನ ಶಿರಕೋಳ, ಮೆಹಬೂಬ ಅಣ್ಣಿಗೇರಿ, ಸಂಜು ಗುರಿಕಾರ, ಸಮೀರ ಇಂಜಿನಿಯರ್ ಹಾಗೂ ಗಂಗಾಧರ ಕತ್ತಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಶ್ರೀಕಾಂತ ಮನ್ವಾಚಾರ್ಯ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *