ಪಶುಪತಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸುಧಾ ಡೊಳ್ಳಿನ ಅವಿರೋಧ ಆಯ್ಕೆ

Spread the love

ಕುಂದಗೋಳ: ತಾಲ್ಲೂಕಿನ ಪಶುಪತಿಹಾಳ ಗ್ರಾಮ ಪಂಚಾಯತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರದಂದು ನಡೆದ ಚುನಾವಣೆಯಲ್ಲಿ ಸುಧಾ ವಿ. ಡೊಳ್ಳಿನ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 9 ಸದಸ್ಯ ಬಲ ಹೊಂದಿರುವ ಈ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಸುಧಾ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಬೇರೆ ಯಾರೂ ಸ್ಪರ್ಧಿಸದ ಕಾರಣ, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಐ.ಎ.ಎಸ್ ಪ್ರೊಬೇಷನರಿ ಅಧಿಕಾರಿ ಹಾಗೂ ತಾ ಪಂ ಇಒ ಆದ ಕುಮಾರಿ ರೀತಿಕಾ ವರ್ಮಾ ಅಧಿಕೃತವಾಗಿ ಘೋಷಿಸಿದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಸುಧಾ ವಿ. ಡೊಳ್ಳಿನ ಅವರು ಮಾತನಾಡಿ, ಪಂಚಾಯತಿಯ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇಲೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಕಾರ್ಯಕ್ಕೆ ಗ್ರಾಮದ ಗುರು-ಹಿರಿಯರು ಹಾಗೂ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದ್ದು, ಎಲ್ಲರ ಸಹಕಾರವನ್ನು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಇದೇ ವೇಳೆ ನೂತನ ಅಧ್ಯಕ್ಷರಾದ ಸುಧಾ ವಿ. ಡೊಳ್ಳಿನ ಅವರನ್ನು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಗ್ರಾಮದ ಗುರು-ಹಿರಿಯರು ಸೇರಿ ಸನ್ಮಾನಿಸಿ ಗೌರವಿಸಿದರು.
ಇದೇ ಸಮಯದಲ್ಲಿ ಗುಡಗೇರಿ ಪೋಲಿಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚಾರಣೆ ಕುರಿತು ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಇಒ ಜಗದೀಶ್ ಕಮ್ಮಾರ, ಪಿಡಿಒ, ಮಹಮ್ಮದಯೂಸೂಪ ಚಕ್ಕುಲಿ, ಪಂಚಾಯತಿ ಉಪಾಧ್ಯಕ್ಷರಾದ ಮಹಂತಪ್ಪ ವಿ. ನಾಗಲಿಂಗಣ್ಣವರ ಸದಸ್ಯರಾದ ರೇಣವ್ವ ಮಲ್ಲಾಪೂರ, ಮಂಜವ್ವ ಮಾಡಳ್ಳಿ, ಸುನಂದಾ ಮಾನೇದ, ಶಿವಾನಂದ ಮಲ್ಲಾಪೂರ, ಅಲ್ಲಾಬಿ ನಧಾಫ, ಚನ್ನಪ್ಪ ಕುರ್ತಕೋಟಿ ಹಾಗೂ ಶೀಲಾ ಮರೋಳ, ವೀರನಗೌಡ ಪಾಟೀಲ, ಬಸವರಾಜ ನಾಯ್ಕರ, ರಾಯಪ್ಪ ಡೊಳ್ಳಿನ, ಶಿವಲಿಂಗಪ್ಪ ವಡಕಣ್ಣವರ, ಶಂಕ್ರಪ್ಪ ವಡಕ್ಕಣ್ಣವರ, ಹೊನ್ನಪ್ಪ ಹಸರಾವಿ, ಶೇಕಪ್ಪ ಕಟಗಿ, ಗುರುರಾಜ ಮಲ್ಲಾಪೂರ, ರಾಘವೇಂದ್ರ ನಾಯ್ಕರ, ಸೇರಿದಂತೆ ಅನೇಕ ಗ್ರಾಮಸ್ಥರು ಹಾಜರಿದ್ದು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

Leave a Reply

Your email address will not be published. Required fields are marked *