
ಧಾರವಾಡ: ವಿದ್ಯಾರ್ಥಿಗಳ ನೈತಿಕ ಜೀವನಕ್ಕೆ ಮೌಲ್ಯಗಳೇ ದೃಢವಾದ ಚೌಕಟ್ಟು. ಮೌಲ್ಯಗಳು ವಿದ್ಯಾರ್ಥಿಗಳ ಅಂತರಂಗದ ಜೀವನದಲ್ಲಿ ಹುದುಗಿರುವ ಅಮೂಲ್ಯ ಸಂಪತ್ತಾಗಿವೆ ಎಂದು ಶಿಕ್ಷಣ ತಜ್ಞ ಡಾ. ಎಂ.ವೈ. ಸಾವಂತ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶತಾಯುಷಿ ಲಿ.ಜಿ.ಜಿ. ದೊಡವಾಡ ಅವರ ತಂದೆ ಪೂಜ್ಯ ಶರಣ ಲಿಂ. ಗುರುಪಾದ ದುಂಡಪ್ಪ ದೊಡವಾಡ ದತ್ತಿ ಕಾರ್ಯಕ್ರಮದಲ್ಲಿ ಅವರು ‘ಮೌಲ್ಯಯುತ ಶಿಕ್ಷಣ – ಇಂದಿನ ಅಗತ್ಯತೆ’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಮೌಲ್ಯ ಶಿಕ್ಷಣವು ಕುಟುಂಬದಲ್ಲೇ, ಮಕ್ಕಳ ಬಾಲ್ಯಾವಸ್ಥೆಯಲ್ಲಿಯೇ ಆರಂಭವಾಗಬೇಕು. ತಾಯಿಯೇ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವ ಮೊದಲ ಗುರುವಾಗಬೇಕು. ಪ್ರೀತಿ, ಶಾಂತಿ, ಕರುಣೆ, ಸಹಬಾಳ್ವೆ, ಸತ್ಯ, ಸೌಹಾರ್ದತೆ ಮುಂತಾದ ಜೀವನ ಮೌಲ್ಯಗಳನ್ನು ಎಳೆಯ ವಯಸ್ಸಿನಲ್ಲಿ ಬೆಳೆಸಿದರೆ, ಮಕ್ಕಳು ಭವಿಷ್ಯದಲ್ಲಿ ಸಮಾಜಕ್ಕೆ ಭರವಸೆಯ ವ್ಯಕ್ತಿಗಳಾಗುತ್ತಾರೆ ಎಂದರು. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ತಮ್ಮ ವೃತ್ತಿಧರ್ಮವನ್ನು ಕಾಪಾಡಿಕೊಳ್ಳುವುದರೊಂದಿಗೆ ಉತ್ತಮ ನಡೆ-ನುಡಿ ಹಾಗೂ ಪ್ರಾಮಾಣಿಕತೆಯನ್ನು ಮಕ್ಕಳಲ್ಲಿ ಬೆಳೆಸಬೇಕಿದೆ ಎಂದು ತಿಳಿಸಿದರು.
ಇಂದಿನ ಸಂಕೀರ್ಣ ಸಾಮಾಜಿಕ ಪರಿಸ್ಥಿತಿಯಲ್ಲಿ ನೈತಿಕ ಮೌಲ್ಯಗಳ ಅಧಃಪತನವಾಗುತ್ತಿರುವುದು ವಿಷಾದನೀಯವಾಗಿದೆ. ದಿನನಿತ್ಯ ಪತ್ರಿಕೆಗಳಲ್ಲಿ ಸಮಾಜದಲ್ಲಿ ನಡೆಯಬಾರದಂತಹ ದುಷ್ಕೃತ್ಯಗಳ ವರದಿಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ. ಇದಕ್ಕೆ ಮೌಲ್ಯರಹಿತ ಶಿಕ್ಷಣ ಪದ್ಧತಿಯೇ ಪ್ರಮುಖ ಕಾರಣವಾಗಿದೆ. ಸತ್ಯವು ಮೌಲ್ಯ ಶಿಕ್ಷಣದ ಮೊದಲ ಹೆಜ್ಜೆಯಾಗಿದ್ದರೆ, ಪ್ರಾಮಾಣಿಕತೆ ಎರಡನೇ ಪ್ರಮುಖ ಮೌಲ್ಯವಾಗಿದೆ. ಪ್ರಾಮಾಣಿಕತೆ ನಮ್ಮ ಮುಂದೆ ಮಾತ್ರವಲ್ಲ, ಬೆನ್ನು ಹಿಂದೆಯೂ ಇದ್ದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಬಸವಾದಿ ಶರಣರ ವಚನಗಳಲ್ಲಿಯೂ ಉನ್ನತ ಜೀವನ ಮೌಲ್ಯಗಳು ಅಡಕವಾಗಿವೆ ಎಂದು ಡಾ. ಸಾವಂತ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರಣ ದೊಡವಾಡ ಮಾತನಾಡಿ, ದೊಡವಾಡ ಕುಟುಂಬಕ್ಕೆ ಸುದೀರ್ಘ ಇತಿಹಾಸವಿದ್ದು, ನಮ್ಮ ಹಿರಿಯರು ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಸಾರ್ವಜನಿಕ ಜೀವನದ ಜೊತೆಗೆ ಆಧ್ಯಾತ್ಮಿಕ ಚಿಂತನೆಯನ್ನೂ ಒಳಗೊಂಡ ಕುಟುಂಬ ಪರಂಪರೆ ನಮ್ಮದಾಗಿದೆ. ನಮ್ಮ ಹಿರಿಯರು ಯೋಜನೆ-ಯೋಚನೆಗೆ ಆದ್ಯತೆ ನೀಡಿದ ಜೀವನ ಕ್ರಮ ಅನುಸರಿಸಿದವರು. ಅವರು ನಡೆದುಹೋದ ಮಾರ್ಗದಲ್ಲಿಯೇ ನಾವೂ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.
ವೀರಣ್ಣ ಒಡ್ಡೀನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಗುರು ಹಿರೇಮಠ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಶಿಭೂಷಣ ದೊಡವಾಡ, ವಿಜಯಾನಂದ ದೊಡವಾಡ, ವಿನಯ ದೊಡವಾಡ, ಜಯದೇವ ದೊಡವಾಡ, ಸುಮಂಗಲಾ ಪಾಟೀಲ, ಚಿಂತನ ಹತ್ತಿಕಾಳ, ಶಿವಾನಂದ ಹೂಗಾರ, ನಿಂಗಪ್ಪ ಮಾಯಕೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

