
ನವಲಗುಂದ: ತಾಲ್ಲೂಕಿನ ಶಿರೂರು ಗ್ರಾಮದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಶಾಖೆಯ ಗೋಡೆಯನ್ನು ಒಡೆದು ದರೋಡೆ ಮಾಡಲು ಯತ್ನಿಸಿದ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ. ಬ್ಯಾಂಕ್ನ ಭದ್ರತಾ ಸೈರನ್ ಸಕಾಲಕ್ಕೆ ಮೊಳಗಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ದರೋಡೆ ತಪ್ಪಿದಂತಾಗಿದೆ.
ಬುಧವಾರ ತಡರಾತ್ರಿ ಆಗಮಿಸಿದ ಖದೀಮರು ಬ್ಯಾಂಕ್ನ ಹಿಂಭಾಗದ ಗೋಡೆಯನ್ನು ಒಡೆಯುವ ಮೂಲಕ ಒಳನುಗ್ಗಲು ಪ್ರಯತ್ನಿಸಿದ್ದಾರೆ. ಅರ್ಧದಷ್ಟು ಗೋಡೆ ಒಡೆದ ಸಂದರ್ಭದಲ್ಲೇ ಬ್ಯಾಂಕ್ನಲ್ಲಿದ್ದ ಭದ್ರತಾ ಸೈರನ್ ಸದ್ದು ಮಾಡಲಾರಂಭಿಸಿದೆ.
ಸೈರನ್ ಶಬ್ದದಿಂದ ಗಾಬರಿಗೊಂಡ ದರೋಡೆಕೋರರು ಕೃತ್ಯವನ್ನು ಅರ್ಧಕ್ಕೆ ಕೈಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಗುರುವಾರ ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಎಂದಿನಂತೆ ಕೆಲಸಕ್ಕೆ ಬಂದಾಗ ಗೋಡೆ ಒಡೆದಿರುವುದು ಕಂಡುಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ನವಲಗುಂದ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದರೋಡೆಕೋರರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿ ಜಾಲ ಬೀಸಿದ್ದಾರೆ.

