ಧಾರವಾಡ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (KIADB) ಧಾರವಾಡ ವಲಯದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ವಸತಿ ನಿವೇಶನಗಳ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈಗಾಗಲೇ ನಿವೇಶನಗಳಿಗಾಗಿ ಹಣ ಸಂದಾಯ ಮಾಡಿರುವ ಅರ್ಜಿದಾರರಿಗೆ ಲಾಟರಿ (ಚೀಟಿ ಎತ್ತುವಿಕೆ) ಮೂಲಕ ನಿವೇಶನ ಸಂಖ್ಯೆಯನ್ನು ಹಂಚಿಕೆ ಮಾಡಲು ದಿನಾಂಕ ನಿಗದಿಪಡಿಸಲಾಗಿದೆ.
ಬರುವ ಜನೆವರಿ 21, 2026 ರಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಅಶೋಕ ನಗರದ ಪೊಲೀಸ್ ಠಾಣೆ ಸಮೀಪವಿರುವ ಡಾ. ಬಿ.ಎಸ್. ಕರ್ಕಿ ಕನ್ನಡ ಸಭಾ ಭವನದಲ್ಲಿ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಹಣ ಸಂದಾಯ ಮಾಡಿದ ಕೈಗಾರಿಕೋದ್ಯಮಿಗಳು ಮತ್ತು ಅರ್ಜಿದಾರರು ಈ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ತಿಳಿಸಲಾಗಿದೆ.
ಒಂದು ವೇಳೆ ಅರ್ಜಿದಾರರು ಅನಿವಾರ್ಯ ಕಾರಣಗಳಿಂದ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ತಮ್ಮ ಪರವಾಗಿ ಲಿಖಿತವಾಗಿ ನಿಯೋಜಿಸಲ್ಪಟ್ಟ ಅಧಿಕೃತ ಪ್ರತಿನಿಧಿಯನ್ನು ಕಳುಹಿಸಿಕೊಡಬಹುದು. ನಿಗದಿತ ಸಮಯದಲ್ಲಿ ಅರ್ಜಿದಾರರು ಅಥವಾ ಅವರ ಪ್ರತಿನಿಧಿಗಳು ಉಪಸ್ಥಿತರಿರದಿದ್ದರೆ, ಮಂಡಳಿಯೇ ಲಾಟರಿ ಮೂಲಕ ನಿವೇಶನ ಸಂಖ್ಯೆಯನ್ನು ಅಂತಿಮಗೊಳಿಸಲಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಧಾರವಾಡದ ಲಕ್ಕಮ್ಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

