
ಕುಂದಗೋಳ: “ದೇಶದ ಮಣ್ಣಿನ ಪ್ರತಿ ಕಣದಲ್ಲೂ ಶಂಕರನನ್ನು ಕಂಡವರು ಮತ್ತು ಅಧಿಕಾರವಿರಲಿ ಇಲ್ಲದಿರಲಿ ದೇಶ ಸೇವೆಯೇ ಪರಮೋಚ್ಚ ಎಂದು ಬದುಕಿ ತೋರಿಸಿಕೊಟ್ಟವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ” ಎಂದು ಚಿತ್ರದುರ್ಗ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.
ಪಟ್ಟಣದ ಬಸವಣ್ಣಜ್ಜನವರ ಕಲ್ಯಾಣ ಪುರ ಮಠದ ಸಭಾಭವನದಲ್ಲಿ ಗುರುಕಾರುಣ್ಯ ಪ್ರತಿಷ್ಠಾನ ಹಾಗೂ ಅಟಲ್ ಸಾಹಿತ್ಯ ವೇದಿಕೆ ವತಿಯಿಂದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ‘ಸದ್ಗಮಯ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಟಲ್ ಜೀಯವರು ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡುವ ಮೂಲಕ ದೇಶದ ಗೌರವ ಹೆಚ್ಚಿಸಿದವರು. ಅಧಿಕಾರಕ್ಕೆ ಅಂಟಿಕೊಳ್ಳದೆ 13 ದಿನ, 11 ತಿಂಗಳು ಹಾಗೂ ಪೂರ್ಣಾವಧಿ ಪ್ರಧಾನಿಯಾಗಿ ದೇಶವನ್ನು ಭಾರತೀಯ ದೃಷ್ಟಿಕೋನದಲ್ಲಿ ಮುನ್ನಡೆಸಿದರು ಎಂದು ಹೇಳಿದರು.
ಅವರ ಕಾಲದಲ್ಲಿ ಜಾರಿಯಾದ ಸರ್ವ ಶಿಕ್ಷಣ ಅಭಿಯಾನ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಾಗೂ ಅಂತ್ಯೋದಯ ಪರಿಕಲ್ಪನೆಗಳು ಇಂದಿಗೂ ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿವೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿರಹಟ್ಟಿಯ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, “ಅಟಲ್ ಜೀಯವರ ವಾಕ್ಚಾತುರ್ಯ ಮತ್ತು ಸಿದ್ಧಾಂತಗಳನ್ನು ಕೇಳಿ ನಾವು ಬೆಳೆದಿದ್ದೇವೆ. ಅಂತಹ ಶುದ್ಧ ಮನಸ್ಸಿನ ವ್ಯಕ್ತಿಗಳು ಸಮಾಜಕ್ಕೆ ಎಂದಿಗೂ ಪೂಜನೀಯ” ಎಂದರು. ಇದೇ ವೇಳೆ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಕುಂದಗೋಳ ನೀಡಿದ ಕೊಡುಗೆಯನ್ನು ಅವರು ಸ್ಮರಿಸಿದರು.
ನಂತರ ಶಿವಮೊಗ್ಗದ ಕಗ್ಗ ನಟೇಶ ಅವರು ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗಗಳ ಮೂಲಕ ವಾಜಪೇಯಿ ಅವರ ಜೀವನದ ಸಾರವನ್ನು ಉಣಬಡಿಸಿ ಜನರನ್ನು ಮಂತ್ರಮುಗ್ಧಗೊಳಿಸಿದರು.
ಇದೇ ಸುಸಂದರ್ಭದಲ್ಲಿ ಸಮಾಜ ಸೇವಕ ರಾಚಯ್ಯ ಹಿರೇಮಠ, ಖಾದಿ ಕಾರ್ಯಕರ್ತ ರಾಘವೇಂದ್ರ ಮುತಾಲಿಕದೇಸಾಯಿ ಹಾಗೂ ಕೃಷಿ ಸಾಧಕಿ ರತ್ನಾ ಹೊಸಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಿವ್ಯ ಸಾನಿಧ್ಯ ವಹಿಸಿದ್ದ ಇಂಚಗೇರಿ ಮಠದ ಡಾ. ಎ.ಸಿ. ವಾಲಿ ಗುರೂಜಿ ಅವರು ಆಶೀರ್ವಚನ ನೀಡಿ, ಸಂಗೀತದಿಂದ ಆರಂಭಗೊಂಡು ಸಾಹಿತ್ಯದಲ್ಲಿ ಲೀನವಾದ ಈ ಕಾರ್ಯಕ್ರಮವು ಕಗ್ಗಗಳ ಜ್ಞಾನದಿಂದ ಪರಿಪೂರ್ಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕಲ್ಯಾಣಪುರದ ಶ್ರೀ ಅಭಿನವ ಬಸವಣ್ಣಜ್ಜನವರು ವಹಿಸಿದ್ದರು. ವೇದಿಕೆಯ ಮೇಲೆ ಮಲ್ಲಿಕಾರ್ಜುನ ಬಾಳಿಕಾಯಿ, ಹನುಮಂತಗೌಡ್ರ ಪಾಟೀಲ, ಅರ್ಜುನ ನಾಡಗೀರ, ಶಾಮಸುಂದರ ದೇಸಾಯಿ, ನಾಗರಾಜ ಸುಭರಗಟ್ಟಿ ಸೇರಿದಂತೆ ಜಿಲ್ಲೆಯ ಸಾಹಿತಿಗಳು, ಸಂಗೀತಗಾರರು ಹಾಗೂ ಆಧ್ಯಾತ್ಮಿಕ ಚಿಂತಕರು ಉಪಸ್ಥಿತರಿದ್ದರು.
ಸುಶೀಲೆಂದ್ರ ಕುಂದರಗಿ ಹಾಗೂ ಶಶಿಕಾಂತ ರಾಠೋಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

