ಧಾರವಾಡ: 2025-26ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್.ಡಿ ಅಧ್ಯಯನ ಆರಂಭಿಸಿರುವ ಅರ್ಹ ಅಭ್ಯರ್ಥಿಗಳಿಂದ ಮಾಸಿಕ ವ್ಯಾಸಂಗ ವೇತನ ಹಾಗೂ ಫೆಲೋಶಿಪ್‌ಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ ಅಥವಾ ಅದರ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಸಂಶೋಧನೆ ಆರಂಭಿಸಿರುವ ಹೊಸ ಅಭ್ಯರ್ಥಿಗಳು ಮಾತ್ರ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜನೆವರಿ 09, 2026ರ ಒಳಗಾಗಿ ಆಯಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿ, ಅರ್ಹತೆಗಳು ಹಾಗೂ ನಿಬಂಧನೆಗಳಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್ https://bcwd.karnataka.gov.in ಗೆ ಭೇಟಿ ನೀಡಬಹುದು. ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿರುವ ಎಲ್ಲಾ ಸೂಚನೆಗಳನ್ನು ಕೂಲಂಕಷವಾಗಿ ಓದಿಕೊಂಡ ನಂತರವೇ ಅರ್ಜಿ ಸಲ್ಲಿಸಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

