
ಅಣ್ಣಿಗೇರಿ ದಾಸೋಹ ಮಠದ 62ನೇ ಜಾತ್ರಾ ಮಹೋತ್ಸವ: ಅಡ್ಡಪಲ್ಲಕ್ಕಿ ಉತ್ಸವದ ವೈಭವ
ಅಣ್ಣಿಗೇರಿ: ಪಟ್ಟಣದ ಐತಿಹಾಸಿಕ ದಾಸೋಹ ಮಠದ 62ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಅಡ್ಡಪಲ್ಲಕ್ಕಿ ಉತ್ಸವವು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಜರುಗಿತು. ಭಕ್ತಸಾಗರದ ನಡುವೆ ನಡೆದ ಈ ಭವ್ಯ ಮೆರವಣಿಗೆಯಲ್ಲಿ ದಾಸೋಹ ಮಠದ ಶಿವಕುಮಾರ ಮಹಾಸ್ವಾಮಿಗಳು ಪಲ್ಲಕ್ಕಿಯಲ್ಲಿ ಆಸೀನರಾಗಿ ಭಕ್ತರಿಗೆ ಆಶೀರ್ವಾದ ನೀಡಿದರು.
ಶ್ರೀ ಮಠದಿಂದ ಆರಂಭಗೊಂಡ ಮೆರವಣಿಗೆಯು ಪಟ್ಟಣದ ಮಾರುಕಟ್ಟೆ ಹಾಗೂ ಅಗಸಿ ಓಣಿಯ ಮಾರ್ಗವಾಗಿ ಸಾಗಿತು. ಈ ವೇಳೆ ರಸ್ತೆಗಿಡುಗಟ್ಟಿದ ಭಕ್ತರು ಶ್ರೀ ಸಿದ್ಧಾರೂಢರು, ಶ್ರೀ ಗುರುನಾಥಾರೂಢರು, ರುದ್ರಮುನಿ ಶ್ರೀಗಳು, ಶಂಕರೇಂದ್ರ ಮಹಾಸ್ವಾಮಿಗಳು ಹಾಗೂ ಶಿವಕುಮಾರ ಮಹಾರಾಜರಿಗೆ ಜಯಘೋಷಗಳನ್ನು ಕೂಗುತ್ತಾ ಭಕ್ತಿ ಸಮರ್ಪಿಸಿದರು.
ಮಠದ ತವರು ಮನೆಯಾದ ಜಾಡಗೇರೆ ಓಣಿಯಲ್ಲಿ 120ನೇ ವರ್ಷದ 240ನೇ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಭಕ್ತರು ಅದ್ಧೂರಿ ಸ್ವಾಗತ ಕೋರಿದರು. ಇದೇ ಸಂದರ್ಭದಲ್ಲಿ ಜಾಡಗೇರೆ ಓಣಿಯಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆಯೂ ಆಯೋಜಿಸಲಾಗಿತ್ತು. ಸಾಯಂಕಾಲದ ವೇಳೆಗೆ ಕೆರೆ ಓಣಿ, ಕಮತಗೇರೆ ಓಣಿ ಹಾಗೂ ಜನತಾ ಚಿತ್ರಮಂದಿರದ ಮಾರ್ಗವಾಗಿ ಸಂಚರಿಸಿದ ಪಲ್ಲಕ್ಕಿ ಉತ್ಸವವು ಮರಳಿ ಶ್ರೀ ಮಠಕ್ಕೆ ಆಗಮಿಸಿತು.
ಈ ಮೆರವಣಿಗೆಯಲ್ಲಿ ಹುಬ್ಬಳ್ಳಿ ಸಿದ್ಧಾರೂಢರ ಸಮಕಾಲೀನರಾದ ದಾಸೋಹ ಮಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಹಾಗೂ ಶಂಕರೇಂದ್ರ ಮಹಾಸ್ವಾಮಿಗಳ ಪಂಚಲೋಹದ ಮೂರ್ತಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅಲ್ಲದೆ, ರಾಣೇಬೆನ್ನೂರಿನ ಅಟವಾಳಗಿ ಮನೆತನದವರಿಂದ ನಡೆದ ಗುಗ್ಗಳ ಕಾರ್ಯಕ್ರಮ, ವಿವಿಧ ಯುವಕ ಮಂಡಳಿಗಳ ಕೋಲಾಟ ಹಾಗೂ ಮಕ್ಕಳ ಸಾಂಸ್ಕೃತಿಕ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ದಾಸೋಹ ಮಠ ನಿರಂತರ ಟ್ರಸ್ಟ್ ಅಧ್ಯಕ್ಷ ರಾಜೇಶ್ವರರಾವ್ ದೇಸಾಯಿ, ಪ್ರಧಾನ ಕಾರ್ಯದರ್ಶಿ ಷಣ್ಮುಖ ಗುರಿಕಾರ, ಜಾತ್ರಾ ಮಹೋತ್ಸವದ ಅಧ್ಯಕ್ಷ ವಿರುಪಾಕ್ಷಪ್ಪ ಹಾಳದೋಟರ, ಉಪಾಧ್ಯಕ್ಷರಾದ ಹೇಮಣ್ಣ ಶ್ಯಾನಭೋಗರ, ವಿರುಪಾಕ್ಷಪ್ಪ ಬಣಗಾರ, ಚಂದ್ರಶೇಖರ ಬಿನ್ನಾಳ, ಕಾರ್ಯದರ್ಶಿ ಜಗದೀಶ ಅಬ್ಬಿಗೇರೆಮಠ, ಪರುಶರಾಮ ಭಜಂತ್ರಿ, ರಾಮಚಂದ್ರ ಉಣಕಲ್ಲ, ಮಹೇಶ ಅಂಗಡಿ, ಶಿವಯೋಗಿ ಸುರಕೋಡ, ಬಸವರಾಜ ಯಳವತ್ತಿ ಸೇರಿದಂತೆ ಸೇವಾ ಟ್ರಸ್ಟಿನ ಸದಸ್ಯರು ಹಾಗೂ ಅಣ್ಣಿಗೇರಿ ಸುತ್ತಮುತ್ತಲಿನ ಸಾವಿರಾರು ಭಕ್ತರು ಭಾಗವಹಿಸಿದ್ದರು.
ವರದಿ: ಮಹಾಂತೇಶ ಹಕ್ಕರಕಿ.

