ಏಡ್ಸ್‌ಗೆ ಭಯ ಬೇಡ, ಜಾಗೃತಿ ಅಗತ್ಯ: ಏಡ್ಸ್ ಮುಕ್ತ ಜಿಲ್ಲೆ ಮಾಡಲು ಶ್ರಮಿಸಿ; ಜಿಲ್ಲಾಧಿಕಾರಿ ದಿವ್ಯ ಪ್ರಭು ಕರೆ

Spread the love

ಧಾರವಾಡ: ಏಡ್ಸ್ ರೋಗದ ಬಗ್ಗೆ ಯಾವುದೇ ಭಯ ಬೇಡ. ಬದಲಾಗಿ ಮುಂಜಾಗ್ರತೆ, ಜಾಗೃತಿ ಮತ್ತು ಅರಿವು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಧಾರವಾಡ ಜಿಲ್ಲೆಯಲ್ಲಿ ಏಡ್ಸ್ ರೋಗಿಗಳ ಪ್ರಮಾಣ ಮತ್ತು ಹರಡುವಿಕೆ ಇಳಿಮುಖವಾಗಿದ್ದು, ಈಗ ಜಿಲ್ಲೆಯಲ್ಲಿ ಏಡ್ಸ್ ಪಾಸಿಟಿವಿಟಿ ದರ ಶೇ. 0.38 ರಷ್ಟಿದೆ. ಇದನ್ನು ಶೂನ್ಯಕ್ಕೆ ಇಳಿಸಿ, ಧಾರವಾಡ ಜಿಲ್ಲೆಯನ್ನು ಏಡ್ಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕು, ಅದಕ್ಕಾಗಿ ಅಗತ್ಯ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಸಂಘಟಿಸೋಣ ಎಂದು ಅವರು ಕರೆ ನೀಡಿದರು.

​ಅವರು ಸೋಮವಾರ (ಡಿ. 01) ರಂದು ಬೆಳಿಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿ, ಚಾಲನೆ ನೀಡಿ ಮಾತನಾಡಿದರು.

​ಕಳೆದ 40 ವರ್ಷಗಳಿಂದ ಮಾನವ ಜನಾಂಗವನ್ನು ಕಾಡುತ್ತಿರುವ ಎಚ್.ಐ.ವಿ. ಮತ್ತು ಏಡ್ಸ್ ಕಾಯಿಲೆಯನ್ನು ಸಮಾಜದಿಂದ ಸಂಪೂರ್ಣವಾಗಿ ತೊಲಗಿಸಲು ಜಿಲ್ಲಾ ಮಟ್ಟದಿಂದ ತಾಲೂಕು ಹಾಗೂ ಗ್ರಾಮ ಮಟ್ಟದವರೆಗೆ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳನ್ನು ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಏಡ್ಸ್ ಕುರಿತು ಜನಜಾಗೃತಿಗಾಗಿ ಜಿಲ್ಲೆಯ ಎಲ್ಲ ತಾಲೂಕು, ಗ್ರಾಮಗಳಲ್ಲಿ ಜಾನಪದ ಕಲಾ ತಂಡಗಳ ಮೂಲಕ ಅರಿವು ಮೂಡಿಸಿ, ಮನೆಮನೆಗೆ ಮಾಹಿತಿ ತಲುಪಿಸಲಾಗುತ್ತಿದೆ. ಕರಪತ್ರ, ಪೋಸ್ಟರ್, ಬಿತ್ತಿಪತ್ರ ಮತ್ತು ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಯುವ ಸಮೂಹವನ್ನು ಕೇಂದ್ರಿಕರಿಸಿ, ವಿವಿಧ ರೀತಿಯ ಅರಿವು ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

​ಧಾರವಾಡ ಜಿಲ್ಲೆಯಲ್ಲಿ ಸಮಗ್ರ ಆಪ್ತಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪೂರ್ಣ ಪ್ರಮಾಣದ ಎಆರ್‌ಟಿ ಚಿಕಿತ್ಸಾ ಕೇಂದ್ರಗಳು, ರಕ್ತ ನಿಧಿ ಕೇಂದ್ರಗಳು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಏಡ್ಸ್ ಮತ್ತು ಎಚ್‌ಐವಿ ಸೋಂಕಿತರಿಗೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ, ಚಿಕಿತ್ಸೆ, ಔಷಧಿ ಮತ್ತು ಆರೈಕೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

​ಸೋಂಕಿತ ಅನಾಥ ಮತ್ತು ಅಪಾಯದ ಅಂಚಿನಲ್ಲಿರುವ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ವಿಶೇಷ ಪಾಲನಾ ಯೋಜನೆಯಡಿ ಇಲ್ಲಿಯವರೆಗೆ 2,037 ಮಕ್ಕಳಿಗೆ ಸೌಲಭ್ಯ ನೀಡಲಾಗಿದೆ. ಎಚ್‌ಐವಿ, ಏಡ್ಸ್‌ನೊಂದಿಗೆ ಬದುಕುತ್ತಿರುವ 371 ಜನರಿಗೆ ಅನ್ನ ಅಂತ್ಯೋದಯ ಕಾರ್ಯಕ್ರಮದಲ್ಲಿ ನೆರವು ನೀಡಲಾಗಿದ್ದು, ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ 476 ಜನರನ್ನು ವಸತಿ ಸೌಲಭ್ಯಕ್ಕಾಗಿ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ. ವೃತ್ತಿ ಕೌಶಲ್ಯ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

​ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶ ಪಿ. ಎಫ್. ದೊಡ್ಡಮನಿ ಅವರು ಮಾತನಾಡಿ, ಎಚ್‌ಐವಿ, ಏಡ್ಸ್ ಸೋಂಕಿತರಿಗೆ ಮತ್ತು ಬಾಧಿತರಿಗೆ ಸಮಾಜದಲ್ಲಿ ಮಾನಸಿಕ ಬೆಂಬಲ ಸಿಗಬೇಕು. ಅಗತ್ಯ ಚಿಕಿತ್ಸೆ ದೊರಕಿಸಲು ನೆರವಾಗಬೇಕು. ಕಾನೂನು ಸೇವೆಗಳ ಪ್ರಾಧಿಕಾರದಿಂದ ಎಚ್‌ಐವಿ ಬಾಧಿತರಿಗೆ ಉಚಿತ ಕಾನೂನು ಅರಿವು ಮತ್ತು ನೆರವು ನೀಡಲಾಗುತ್ತದೆ ಎಂದು ಹೇಳಿದರು.

​ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಎಂ. ಹೊನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ರವೀಂದ್ರ ಬೋವೆರ ಸ್ವಾಗತಿಸಿದರು. ಐಇಸಿ ವಿಭಾಗದ ಅಧಿಕಾರಿ ಬಿ. ಆರ್. ಪತ್ತಾರ ಕಾರ್ಯಕ್ರಮ ನಿರೂಪಿಸಿದರು. ಜಾನಪದ ಕಲಾವಿದ ಶಂಭಯ್ಯ ಹಿರೇಮಠ ನೇತೃತ್ವದ ಸಿವೈಸಿಡಿ ಜಾನಪದ ಕಲಾ ತಂಡದಿಂದ ಜಾನಪದ ರೂಪಕ ಪ್ರದರ್ಶಿಸಲಾಯಿತು.

​ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ಸರ್ಕಾರೇತರ ಸಂಸ್ಥೆಯ ಸದಸ್ಯರು, ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಏಡ್ಸ್ ಕುರಿತು ಜನಜಾಗೃತಿ ಜಾಥಾ ನಡಿಗೆಯು ಡಿಎಚ್‌ಓ ಕಚೇರಿಯಿಂದ ಆರಂಭಗೊಂಡು, ಧಾರವಾಡ ಹಳೆ ಬಸ್ ನಿಲ್ದಾಣ, ವಿವೇಕಾನಂದ ಸರ್ಕಲ್, ಆಲೂರು ವೆಂಕಟರಾವ ವೃತ್ತದ ಮೂಲಕ ಡಿಎಚ್‌ಓ ಕಚೇರಿಗೆ ತಲುಪಿತು.

Leave a Reply

Your email address will not be published. Required fields are marked *