
ಕುಂದಗೋಳದಲ್ಲಿ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನಾಚರಣೆ; ಕಾನೂನುಗಳ ಸಮರ್ಪಕ ಬಳಕೆ ಆಗದಿರುವ ಬಗ್ಗೆ ಕಳವಳ
ಕುಂದಗೋಳ: ನವೆಂಬರ್ 25: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಹಲವು ಕಾನೂನುಗಳು ಜಾರಿಯಲ್ಲಿದ್ದರೂ, ಅವುಗಳ ಸಮರ್ಪಕ ಬಳಕೆ ಆಗುತ್ತಿಲ್ಲ. ಕಾನೂನುಗಳ ಪರಿಣಾಮಕಾರಿ ಬಳಕೆಗಾಗಿ ಈ ಅಂತಾರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಗೌರವಾನ್ವಿತ ನ್ಯಾಯಾಧೀಶರಾದ ಅಬ್ದುಲ್ ಖಾದರ್ ಅವರು ಹೇಳಿದರು.
ಕುಂದಗೋಳ ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿ ಕಾರ್ಯಾಲಯದಲ್ಲಿ ನಡೆದ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನಾಚರಣೆಯ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಅವರು, ಈ ಅರಿವು ಕಾರ್ಯಾಗಾರವು “ಮಹಿಳೆಯರ ರಕ್ಷಣೆಗಾಗಿ” ನಡೆದಿದೆ ಎಂದರು.
ಬಳಿಕ ಗೌರವಾನ್ವಿತ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗಾಯತ್ರಿ ಅವರು ಮಾತನಾಡಿ, ಮಹಿಳೆಯರು ಹಲವಾರು ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೂ, ಅನೇಕ ವೇಳೆ ಆ ನೋವನ್ನು ಯಾರಿಗೂ ಹೇಳಿಕೊಳ್ಳದೆ ಖಿನ್ನತೆಗೆ ಒಳಗಾಗುತ್ತಾಳೆ. “ನಾನು ಒಬ್ಬ ಹೆಣ್ಣು” ಎಂಬ ಭಾವನೆ ಮತ್ತು ದೌರ್ಜನ್ಯದ ಭಯವು ಆಕೆಯನ್ನು ಮೌನವಾಗಿಸಿದೆ. ಈ ಭಯದಿಂದ ಹೊರಬಂದು, ದೌರ್ಜನ್ಯದ ವಿರುದ್ಧ ಮಹಿಳೆ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ನಿರ್ದೇಶಕರಾದ ಶರಣು ಜಂತಗಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಬಿ.ಪಿ.ಪಾಟೀಲ್, ಕಾರ್ಯದರ್ಶಿ ವಾಯ್.ಬಿ.ಬಿಳೇಬಾಳ್, ಕೋಶಾಧ್ಯಕ್ಷರಾದ ಎ. ವಿ. ಕ್ಯಾರಕಟ್ಟಿ, ಸಹಾಯಕ ಸರ್ಕಾರಿ ಅಭಿಯೋಜಕಿ ಚಂದ್ರಕಲಾ ಪ್ರಭಾಕರ, ಎಸಿಡಿಓ ಶಮಶಾದಬೇಗಂ ಕುಂದಗೋಳ, ಗೀತಾ.ಜಿ, ಉಪನ್ಯಾಸಕರಾದ ಜಿ. ಬಿ. ಸೊರಟೂರ ಮತ್ತು ಸತೀಶ್ ಭಟ್ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

