
ಕುಂದಗೋಳ: ಬಡತನದ ರೇಖೆಗಿಂತ ಕೆಳಗಿರುವ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಪೋಷಕರು ನಂಬಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗೆ ಸೇರಿಸಿದರೆ, ಪಟ್ಟಣದ ಮೌನೇಶ್ವರ ಪ್ಲಾಟ್‌ನಲ್ಲಿರುವ ಮೆಟ್ರಿಕ್ ಪೂರ್ವ ವಸತಿ ನಿಲಯವು ರೋಗಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ವಸತಿ ನಿಲಯದ ಆಡಳಿತ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ, ಇಲ್ಲಿ ವಾಸಿಸುತ್ತಿರುವ 55 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಸುಮಾರು ಒಂದುವರೆ ತಿಂಗಳಿಂದ ಚರ್ಮರೋಗದಿಂದ ನರಕ ಯಾತನೆ ಅನುಭವಿಸುತ್ತಿದ್ದಾರೆ!
ವಿದ್ಯಾರ್ಥಿಗಳ ಕೈ, ಮೈ ಮತ್ತು ಖಾಸಗಿ ಭಾಗಗಳಲ್ಲಿ ಬೊಬ್ಬೆಗಳಂತಹ ತೀವ್ರ ಸ್ವರೂಪದ ಚರ್ಮ ರೋಗ ಕಾಣಿಸಿಕೊಂಡಿದೆ. ಇದಕ್ಕಾಗಿ ಆರೋಗ್ಯ ಇಲಾಖೆ ಕೇವಲ ತಾತ್ಕಾಲಿಕ ಚಿಕಿತ್ಸೆ ನೀಡಿ ಕೈ ತೊಳೆದುಕೊಂಡಿದೆ. ಇದರಿಂದ ರೋಗ ವಾಸಿಯಾಗದೆ ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ.
🚽 ದುರ್ವಾಸನೆಯ ಕೂಪ; ಸವಳು ನೀರು ಇರುವ ಕಾರಣ
ಈ ಅಮಾನವೀಯ ಸ್ಥಿತಿಗೆ ಹಾಸ್ಟೆಲ್‌ನಲ್ಲಿನ ಸಂಪೂರ್ಣ ಅನೈರ್ಮಲ್ಯವೇ ಕಾರಣ. ವಿದ್ಯಾರ್ಥಿಗಳಿಗೆ ಕುಡಿಯಲು ಮತ್ತು ಬಳಸಲು ಸವಳು ನೀರು. ವಾರ್ಡನ್ ಸೇರಿದಂತೆ ಯಾರೊಬ್ಬರೂ ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸದೆ ಇರುವುದರಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದೇ ನೀರಿಯಿಂದ ಚರ್ಮರೋಗ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ.
ಹಾಸ್ಟೆಲ್‌ನ ಶೌಚಾಲಯಗಳಿಗೆ ಸರಿಯಾದ ಬಾಗಿಲುಗಳಿಲ್ಲ. ಮುಖ್ಯವಾಗಿ, ಶೌಚಾಲಯದ ಒಳಗೆ ಪೈಪ್‌ಲೈನ್ ಸರಿಯಾಗಿಲ್ಲದ ಕಾರಣ ನೀರು ಅಲ್ಲೇ ಶೇಖರಣೆ ಆಗುತ್ತಿದೆ. ಶೌಚಾಲಯದ ಸೆಪ್ಟಿಕ್ ಟ್ಯಾಂಕ್ (ಚೇಂಬರ್) ಪೂರ್ಣವಾಗಿ ತುಂಬಿ ಹೋಗಿದ್ದು, ಆವರಣದಲ್ಲಿ ವಿಪರೀತ ದುರ್ವಾಸನೆ ಹರಡುವ ಸಾಧ್ಯತೆ ಇದೆ. ಈ ವಿಷಮ ಪರಿಸರದಲ್ಲಿ ಮಕ್ಕಳನ್ನು ಇರಿಸಿರುವುದು ಅವರ ಜೀವದ ಜೊತೆ ಆಡುವ ಅಪಾಯಕಾರಿ ಆಟವಾಗಿದೆ. ಇಷ್ಟಲ್ಲದೆ, ನೀರಿನ ಪೈಪ್‌ಲೈನ್‌ಗಳು ಸರಿಯಾಗಿಲ್ಲದೆ ನೀರು ಪೋಲಾಗುತ್ತಿದೆ.
😡 ಆಹಾರದಲ್ಲೂ ತಾರತಮ್ಯ; ಪಾಲಕರ ಆಕ್ರೋಶ
ಹಾಸ್ಟೆಲ್‌ನಲ್ಲೇ ಇದ್ದರೂ ವಿದ್ಯಾರ್ಥಿಗಳಿಗೆ ಪೂರೈಸುವ ಆಹಾರದ ಗುಣಮಟ್ಟವೂ ಕಳಪೆಯಾಗಿದೆ. ಈ ಹಿಂದೆ ನೀಡಲಾದ ಗೋಧಿಯಲ್ಲಿ ಕಸಕಡ್ಡಿ ಸಿಕ್ಕಿರುವ ಸಂಗತಿ ವರದಿಯಾಗಿದೆ. ಈ ವ್ಯವಸ್ಥೆಯಲ್ಲಿಯೇ ವಿದ್ಯಾರ್ಥಿಗಳು ದಿನನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಪಶುಪತಿಹಾಳ ಗ್ರಾಮದ ಹಾಸ್ಟೆಲ್‌ನಲ್ಲಿರುವ ಮಕ್ಕಳ ಪಾಲಕರು ಈ ಅವ್ಯವಸ್ಥೆ ಮತ್ತು ಮಕ್ಕಳ ಆರೋಗ್ಯ ಸ್ಥಿತಿಯನ್ನು ಕಂಡು, ತೀವ್ರ ಆಕ್ರೋಶಗೊಂಡು ಹಾಸ್ಟೆಲ್‌ಗೆ ಭೇಟಿ ನೀಡಿ, ಮಕ್ಕಳ ಸ್ಥಿತಿ ಹೀಗಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದ್ದಾರೆ.
ಆದರೆ, ಇಷ್ಟೆಲ್ಲಾ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಈವರೆಗೆ ಹಾಸ್ಟೆಲ್‌ಗೆ ಭೇಟಿ ನೀಡಿಲ್ಲ! ಇದರರ್ಥ, ಬಡ ಮಕ್ಕಳ ಆರೋಗ್ಯದ ಕುರಿತು ಜಿಲ್ಲಾಡಳಿತಕ್ಕೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬುದು ಸ್ಪಷ್ಟವಾಗುತ್ತದೆ.
ಇನ್ನಾದರೂ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಈ ಕಡೆ ಕಣ್ತೆರೆದು, ಮಕ್ಕಳಿಗೆ ಆರೋಗ್ಯಕರ ಪರಿಸರ ಒದಗಿಸಿ, ಚರ್ಮರೋಗವನ್ನು ಸಂಪೂರ್ಣವಾಗಿ ಗುಣಪಡಿಸುವತ್ತ ತುರ್ತು ಕ್ರಮ ಕೈಗೊಳ್ಳುತ್ತದೆಯೇ? ಅಥವಾ ಮಕ್ಕಳ ಭವಿಷ್ಯವನ್ನು ಬಲಿಗೊಟ್ಟು ಕಣ್ಮುಚ್ಚಿ ಕುಳಿತುಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು.
ಕೋಟ01: ಮಿನಾಕ್ಷೀ ಗುದಗಿಯವರ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕುಂದಗೋಳ
ಈ ಘಟನೆ ನಮ್ಮ ಗಮನಕ್ಕೆ ಬಂದಿದೆ. ಪರಿಶಿಲನೆ ಮಾಡಿ ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೋಳ್ಳುತ್ತೇವೆ. ಮಕ್ಕಳ ಆರೋಗ್ಯದ ಬಗ್ಗೆ ಪರಿಶಿಲನೆ ಮಾಡಲು ತಿಳಿಸುತ್ತೇನೆ.
ಕೋಟ 02 ವಾರ್ಡನ್ ಮಾದೇವಿ ಹಂಜಗಿ ಅವರ ಸ್ಪಷ್ಟೀಕರಣ: “ಈ ಹಾಸ್ಟೆಲ್‌ನಲ್ಲಿ ಒಟ್ಟು 55 ವಿದ್ಯಾರ್ಥಿಗಳಿದ್ದು, ಅವರಲ್ಲಿ 20 ವಿದ್ಯಾರ್ಥಿಗಳಿಗೆ 45 ದಿನಗಳಿಂದ ಚರ್ಮರೋಗ ಕಾಣಿಸಿಕೊಂಡಿದೆ. ಇದಕ್ಕಾಗಿ ಆರೋಗ್ಯ ಇಲಾಖೆಗೆ ತೋರಿಸಿದ್ದೆವು. ಶೌಚಾಲಯ, ನೀರಿನ ಸಮಸ್ಯೆ, ಆಹಾರದ ಸಮಸ್ಯೆಗಳನ್ನು ಮುಂದೆ ಎಲ್ಲವನ್ನು ಸರಿಪಡಿಸಿಕೊಂಡು ಹೋಗುತ್ತೇನೆ,” ಎಂದು ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ ವಾರ್ಡನ್ ಮಾದೇವಿ ಹಂಜಗಿ ತಿಳಿಸಿದ್ದಾರೆ.
ಕೋಟ: 03
ಮುಂಜುನಾಥ ತಳಗೇರಿ ಕಾಂದ್ರೋಳ್ಳಿ ಬಣದ ಡಿಎಸ್ ಎಸ್ ಜಿಲ್ಲಾ ಕೋಶಾಧ್ಯಕ್ಷ
ಬಡತನದಲ್ಲಿರುವ ಮಕ್ಕಳು ಹಾಸ್ಟೆಲ್ ಲ್ಲಿ ಸರಿಯಾದ ಮೂಲಸೌಕರ್ಯ ವ್ಯವಸ್ಥೆ ಇರುತ್ತದೆ. ಎಂದು ಹಾಸ್ಟೇಲ್ ಗೆ ಮಕ್ಕಳನ್ನು ಕಳಿಸಿದರೆ. ಈ ಹಾಸ್ಟೆಲ್ ನಲ್ಲಿ ಅದಕ್ಕೆ ತತ್ವಿರುದ್ದ ಎಂಬತೆ ಮಕ್ಕಳಿ ಸರಿಯಾದ ಚಿಕ್ಸತೆ ನೀಡದೆ ಅನಾರೋಗ್ಯಕ್ಕೆ ತಳ್ಳಿರುವದು ಅಮಾವಿಯ ಹಾಗೂ ಸರಿಯಾದ ಶೌಚಾಲಯ ವ್ಯವಸ್ಥೆ ಹಾಗೂ ನೀರಿನ ವ್ಯವಸ್ಥೆ ಇಲ್ಲದಿರುವುದು ಸೋಚನಿಯ ಸಂಘತಿ ಇನ್ನಾದದರೂ ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಸರಿಪಡಿಸದಿದ್ದರೆ. ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಕೆ ನೀಡಿದರು.

