ಧಾರವಾಡ ನ.12: ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗಿರುವ ಸಹಕಾರ ಕ್ಷೇತ್ರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ, 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ನವೆಂಬರ್ 14, 2025 ರಿಂದ ನವೆಂಬರ್ 20, 2025 ರವರೆಗೆ ಆಚರಿಸಲಾಗುತ್ತಿದೆ ಎಂದು ಧಾರವಾಡ ಜಿಲ್ಲಾ ಸಹಕಾರಿ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ದೇಶಾದ್ಯಂತ ಆಚರಿಸಲ್ಪಡುತ್ತಿರುವ ಈ ಸಹಕಾರ ಸಪ್ತಾಹದ ಮುಖ್ಯ ಧೈಯವು “ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು” ಎಂಬುದಾಗಿದೆ. ಸಹಕಾರ ಕ್ಷೇತ್ರದ ಸಾಧನೆಗಳನ್ನು ಸಾರ್ವಜನಿಕರ ಗಮನಕ್ಕೆ ತರುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಇದೇ ವೇಳೆ, ಹಳ್ಳಿ ಹಳ್ಳಿಯಲ್ಲಿರುವ ರೈತಾಪಿ ವರ್ಗದವರಿಗೆ, ಜನ ಸಾಮಾನ್ಯರಿಗೆ ಹಾಗೂ ಯುವಕರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ಸಮಗ್ರ ಮಾಹಿತಿ ತಲುಪುವಂತೆ ಮಾಡಿ, ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವುದು ಸಹಕಾರ ಸಪ್ತಾಹದ ಹಿಂದಿನ ಮುಖ್ಯ ಗುರಿಯಾಗಿದೆ.

