ನ.14ರಂದು ಜಿಲ್ಲೆಯ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಪೋಷಕ-ಶಿಕ್ಷಕರ ಮಹಾಸಭೆ

Spread the love


ನ.14ರಂದು ಜಿಲ್ಲೆಯ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಪೋಷಕ-ಶಿಕ್ಷಕರ ಮಹಾಸಭೆ

ಧಾರವಾಡ:ಜಿಲ್ಲೆಯಾದ್ಯಂತ ಮಕ್ಕಳ ದಿನಾಚರಣೆಯ ಅಂಗವಾಗಿ ನವೆಂಬರ್ 14 ರಂದು ಏಕಕಾಲದಲ್ಲಿ 2025–26 ನೇ ಸಾಲಿನ ಪೋಷಕ-ಶಿಕ್ಷಕರ ಮಹಾಸಭೆ ಆಯೋಜನೆಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಈ ಮಹಾಸಭೆ ನಡೆಯಲಿದ್ದು, ಶಾಲಾ ಮತ್ತು ಕಾಲೇಜುಗಳ ಎಲ್ಲ ಪ್ರಮುಖ ಪಾಲುದಾರರು — ಪೋಷಕರು, ಶಿಕ್ಷಕರು, ಎಸ್‌ಡಿಎಂಸಿ ಮತ್ತು ಸಿಡಿಸಿ ಸದಸ್ಯರು — ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.

ಸರ್ಕಾರಿ ಶಾಲೆಗಳು ಹಾಗೂ ಕಾಲೇಜುಗಳು ಅರ್ಹ ವಯಸ್ಸಿನ ಮಕ್ಕಳಿಗೆ ಒಳಗೊಳ್ಳುವಿಕೆ, ಪ್ರವೇಶಾವಕಾಶ ಮತ್ತು ಸಮಾನತೆಯ ಮೂಲಕ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿವೆ. ಎಸ್.ಡಿ.ಎಂ.ಸಿ. ಹಾಗೂ ಸಿ.ಡಿ.ಸಿ.ಗಳ ಸಹಕಾರದಿಂದ ಇವುಗಳು ಸಮುದಾಯದ ಹಿತಾಸಕ್ತಿಗಳ ಫಲಶ್ರುತಿಯಾಗಿವೆ ಎಂದು ಅವರು ಹೇಳಿದರು.

“ಶಾಲಾ-ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಪೋಷಕರಲ್ಲಿ ವಿಶ್ವಾಸವನ್ನು ಬಲಪಡಿಸುವುದು ಈ ಮಹಾಸಭೆಯ ಮುಖ್ಯ ಉದ್ದೇಶ,” ಎಂದು ಕೆಳದಿಮಠ ಹೇಳಿದರು.

ಅವರು ಮುಂದುವರೆದು, “ರಾಷ್ಟ್ರ ನಿರ್ಮಾಣ ಹಾಗೂ ಚೈತನ್ಯಶೀಲ ಸಮಾಜ ನಿರ್ಮಾಣಕ್ಕಾಗಿ ಎಲ್ಲಾ ಅರ್ಹ ವಯೋಮಾನದ ಮಕ್ಕಳು ಶಾಲೆಗೆ ದಾಖಲಾಗಿ, ನಿರಂತರವಾಗಿ ಹಾಜರಾಗಿ ಗುಣಮಟ್ಟದ ಶಿಕ್ಷಣ ಪಡೆಯುವುದು ಅತ್ಯಗತ್ಯ. ಮಕ್ಕಳ ಕಲಿಕೆಯು ಶಾಲೆ, ಮನೆ ಮತ್ತು ಸಮಾಜದ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ಪೋಷಕರ ಪಾತ್ರ ಅತ್ಯಂತ ಪ್ರಮುಖ,” ಎಂದು ಹೇಳಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಸರ್ಕಾರದ ವಿವಿಧ ಶಿಕ್ಷಣ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪೋಷಕ-ಶಿಕ್ಷಕ ಸಭೆಗಳು ಪೂರಕ ವೇದಿಕೆಯಾಗಿ ಕಾರ್ಯನಿರ್ವಹಿಸಲಿವೆ ಎಂದು ಅವರು ತಿಳಿಸಿದ್ದಾರೆ.


Leave a Reply

Your email address will not be published. Required fields are marked *