
ಬೆಂಗಳೂರು:ಸರ್ಕಾರಿ ಸ್ಥಳಗಳಲ್ಲಿ, ಅದರಲ್ಲೂ ಮುಖ್ಯವಾಗಿ ಶಾಲಾ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಚಟುವಟಿಕೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ ಶುರುವಾಗಿದೆ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಬರೆದಿದ್ದ ಪತ್ರಕ್ಕೆ ಸರ್ಕಾರ ಸ್ಪಂದಿಸಿದ ನಂತರ, 2013 ರಲ್ಲಿ ಬಿಜೆಪಿ ಸರ್ಕಾರವೇ ಹೊರಡಿಸಿದ್ದ ಆದೇಶವನ್ನು ಖರ್ಗೆ ಅವರು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಖಾಸಗಿ ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಪೂರ್ವಾ ಅನುಮತಿ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ (ಹಿಂದಿನ ಟ್ವಿಟರ್) ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಸರ್ಕಾರದ ಆದೇಶವನ್ನು ನೆನಪಿಸಿದ ಖರ್ಗೆ:
“ಶಾಲೆಗಳು, ಶಾಲೆಗಳ ಆವರಣಗಳು ಯಾವುದೇ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಂದ ಮುಕ್ತವಾಗಿರಬೇಕು. ಶಾಲೆಗಳು ಶಿಕ್ಷಣೇತರ ಚಟುವಟಿಕೆಗಳಿಂದ ಮುಕ್ತವಾಗಿರಬೇಕು. ಶಾಲೆಗಳ ಆವರಣವು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಿರಬೇಕು,” ಎಂಬ ಆದೇಶವನ್ನು 2013ರಲ್ಲಿ ಬಿಜೆಪಿ ಸರ್ಕಾರವೇ ಹೊರಡಿಸಿತ್ತು ಎಂದು ಖರ್ಗೆ ಅವರು ಉಲ್ಲೇಖಿಸಿದ್ದಾರೆ.
ಈ ಆದೇಶವನ್ನು ಆಧರಿಸಿ ಬಿಜೆಪಿ ಪಕ್ಷವನ್ನು ಪ್ರಶ್ನಿಸಿರುವ ಖರ್ಗೆ, “@BJP4Karnataka ಪಕ್ಷಕ್ಕೆ ತನ್ನದೇ ಸರ್ಕಾರ ಹೊರಡಿಸಿದ ಆದೇಶ, ತಾವೇ ರೂಪಿಸಿದ ನಿಯಮಗಳ ಬಗ್ಗೆ ಅರಿವಿಲ್ಲವೇ? ಅಥವಾ ಈ ಆದೇಶ ಆರ್ಎಸ್ಎಸ್ಗೆ ಅನ್ವಯಿಸುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಆರ್ಎಸ್ಎಸ್ಗೆ ವಿಶೇಷ ಸ್ಥಾನಮಾನವೇ?
ಆರ್ಎಸ್ಎಸ್ ಸಂಘಟನೆಯು ದೇಶದ ಸಂವಿಧಾನ, ಕಾನೂನು ಮತ್ತು ನೀತಿ ನಿಯಮಗಳಿಗೆ ಅತೀತವಾಗಿದೆ ಎಂದು ಬಿಜೆಪಿ ಭಾವಿಸಿದೆಯೇ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಆದೇಶ ಜಾರಿಯಲ್ಲಿದ್ದರೂ ಆರ್ಎಸ್ಎಸ್ ಎಂಬ ಸಂಘಟನೆಯು ಯಾವುದೇ ಅಂಜಿಕೆ ಇಲ್ಲದೆ ಶಾಲೆಗಳು ಹೆಡ್ಗೆವಾರ್ ಅವರ ವಂಶಸ್ಥರ ಆಸ್ತಿ ಎಂಬಂತಹ ಧೋರಣೆಯಲ್ಲಿ ತನ್ನ ಚಟುವಟಿಕೆ ನಡೆಸುತ್ತಿದೆ,” ಎಂದು ಅವರು ಆರೋಪಿಸಿದ್ದಾರೆ.
ಕೊನೆಯಲ್ಲಿ, “ಕೂಗುಮಾರಿಗಳಂತೆ ಕೂಗುತ್ತಿರುವ ಬಿಜೆಪಿಯವರು ತಮ್ಮ ಸರ್ಕಾರದ ಆದೇಶವನ್ನು ಒಮ್ಮೆ ಅವಲೋಕನ ಮಾಡಿ ನಂತರ ತಾವೇನು ಮಾತಾಡಬೇಕು ಎಂದು ನಿರ್ಧರಿಸಲಿ,” ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ಸರ್ಕಾರಿ ಮತ್ತು ಶಾಲಾ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳ ಚಟುವಟಿಕೆಗಳ ಮೇಲಿನ ನಿರ್ಬಂಧದ ಕುರಿತು ರಾಜಕೀಯ ವಲಯದಲ್ಲಿ ಬಿಸಿ ಚರ್ಚೆ ಆರಂಭವಾಗಿದೆ.

