ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಖರೀದಿ: ರೈತರ ನೋಂದಣಿಗೆ ಧಾರವಾಡ ಜಿಲ್ಲಾಧಿಕಾರಿ ಮನವಿ

Spread the love

ಧಾರವಾಡ : ಕೇಂದ್ರ ಸರ್ಕಾರದ 2026-27ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಧಾರವಾಡ ಜಿಲ್ಲೆಯ ರೈತರಿಂದ ಎಫ್‌ಎಕ್ಯೂ ಗುಣಮಟ್ಟದ ಹೆಸರುಕಾಳು ಮತ್ತು ಸೋಯಾಬೀನ್ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ಹೆಸರುಕಾಳಿಗೆ ಪ್ರತಿ ಕ್ವಿಂಟಾಲ್‌ಗೆ ₹8,780 ಹಾಗೂ ಸೋಯಾಬೀನ್‌ಗೆ ₹5,708 ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು, ಹೆಸರುಕಾಳು ಖರೀದಿಗಾಗಿ 23 ಹಾಗೂ ಸೋಯಾಬೀನ್ ಖರೀದಿಗಾಗಿ 15 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯ ರೈತರು ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.

ರೈತರು ಖರೀದಿ ಕೇಂದ್ರಗಳಲ್ಲಿ ಡಿಸೆಂಬರ್ 19, 2026ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು. ಖರೀದಿ ಪ್ರಕ್ರಿಯೆಗೆ ಡಿಸೆಂಬರ್ 29, 2026ರವರೆಗೆ ಕಾಲಾವಕಾಶ ನಿಗದಿಪಡಿಸಲಾಗಿದೆ. ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಂಡು ಬೆಂಬಲ ಬೆಲೆ ಯೋಜನೆಯ ಪ್ರಯೋಜನ ಪಡೆಯುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಗುಣಮಟ್ಟದ ಉತ್ಪನ್ನ ಖರೀದಿಗೆ ಷರತ್ತುಗಳು

ಹೆಸರುಕಾಳು ಮತ್ತು ಸೋಯಾಬೀನ್ ಉತ್ಪನ್ನಗಳು ಚೆನ್ನಾಗಿ ಒಣಗಿರಬೇಕು. ಕಾಳುಗಳಲ್ಲಿ ತೇವಾಂಶ ಶೇ. 12ಕ್ಕಿಂತ ಕಡಿಮೆ ಇರಬೇಕು. ಉತ್ಪನ್ನಗಳು ನಿಗದಿತ ಗಾತ್ರ, ಬಣ್ಣ ಮತ್ತು ಆಕಾರ ಹೊಂದಿರಬೇಕು. ಗಟ್ಟಿಯಾಗಿದ್ದು, ಮಣ್ಣು ಹಾಗೂ ಇತರ ಕಲ್ಮಶಗಳಿಂದ ಮುಕ್ತವಾಗಿರಬೇಕು. ಸಾಣಿಗೆಯಿಂದ ಸ್ವಚ್ಛಗೊಳಿಸಿದ ಮತ್ತು ಕ್ರಿಮಿಕೀಟಗಳಿಂದ ಬಾಧಿತವಾಗಿರದ ಉತ್ಪನ್ನಗಳನ್ನು ಮಾತ್ರ ಖರೀದಿಸಲಾಗುತ್ತದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ನೀಡುವ ಗೋಣಿ ಚೀಲಗಳಲ್ಲಿ ತಲಾ 50 ಕೆ.ಜಿ. ಪ್ರಮಾಣದಲ್ಲಿ ಉತ್ಪನ್ನಗಳನ್ನು ತುಂಬಿ ನೀಡಬೇಕು.

ಪ್ರತಿ ಎಕರೆಗೆ ಗರಿಷ್ಠ ನಾಲ್ಕು ಕ್ವಿಂಟಾಲ್‌ನಂತೆ, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಹೆಸರುಕಾಳು ಖರೀದಿಸಲಾಗುತ್ತದೆ. ಅದೇ ರೀತಿ, ಪ್ರತಿ ಎಕರೆಗೆ ಗರಿಷ್ಠ ಐದು ಕ್ವಿಂಟಾಲ್‌ನಂತೆ, ಪ್ರತಿ ರೈತರಿಂದ ಗರಿಷ್ಠ 25 ಕ್ವಿಂಟಾಲ್ ಸೋಯಾಬೀನ್ ಖರೀದಿಸಲಾಗುತ್ತದೆ. ಈ ಪ್ರಮಾಣದ ಎಫ್‌ಎಕ್ಯೂ ಗುಣಮಟ್ಟದ ಉತ್ಪನ್ನಗಳನ್ನು ಮಾತ್ರ ಸರ್ಕಾರದ ನಿಗದಿತ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು.

ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ. ರೈತರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗದೆ, ನೇರವಾಗಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಧಾರವಾಡ, ಹುಬ್ಬಳ್ಳಿ, ಕುಂದಗೋಳ, ಅಣ್ಣಿಗೇರಿ ಹಾಗೂ ಕಲಘಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯದರ್ಶಿಗಳನ್ನು ಸಂಪರ್ಕಿಸಬಹುದು. ಅಲ್ಲದೆ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಹುಬ್ಬಳ್ಳಿ ಶಾಖೆಯ ವ್ಯವಸ್ಥಾಪಕರನ್ನು 0836-2004419 ದೂರವಾಣಿ ಸಂಖ್ಯೆಯಲ್ಲಿ ಹಾಗೂ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿಯಮಿತದ (ಕೆ.ಓ.ಎಫ್.) ಹುಬ್ಬಳ್ಳಿ ಶಾಖೆಯ ವ್ಯವಸ್ಥಾಪಕರನ್ನು 7975282932 ಅಥವಾ 9008516771 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ

2026-27ನೇ ಸಾಲಿನ ಹಿಂಗಾರು ಹಂಗಾಮಿಗೆ ಧಾರವಾಡ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಕಡಲೆ, ಜೋಳ, ಗೋಧಿ, ಮೆಕ್ಕೆಜೋಳ, ಕುಸುಬೆ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಬೀಜಗಳು ಲಭ್ಯವಿವೆ. ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಪಡೆಯಬಹುದು. ರೈತರಿಗೆ ಸಹಾಯಧನದಡಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಹಿಂಗಾರು ಹಂಗಾಮಿಗೆ ರಸಗೊಬ್ಬರದ ಕೊರತೆಯಿಲ್ಲ

ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಅಗತ್ಯವಿರುವಷ್ಟು ರಸಗೊಬ್ಬರದ ದಾಸ್ತಾನು ಲಭ್ಯವಿದೆ. ರೈತರಿಗೆ ಯಾವುದೇ ರೀತಿಯ ರಸಗೊಬ್ಬರದ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಗೆ 8,493 ಮೇವಿನ ಬೀಜದ ಮಿನಿ ಕಿಟ್‌ಗಳ ಹಂಚಿಕೆ

ಧಾರವಾಡ ಜಿಲ್ಲೆಯ ಎಂಟು ತಾಲೂಕುಗಳನ್ನು ಸರ್ಕಾರ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಬರ ಪರಿಹಾರ ಯೋಜನೆಯಡಿ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ರಾಜ್ಯಾದ್ಯಂತ ಮೇವಿನ ಬೀಜದ ಮಿನಿ ಕಿಟ್‌ಗಳ ವಿತರಣೆಗಾಗಿ ಇಲಾಖೆಗೆ ₹25 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಧಾರವಾಡ ಜಿಲ್ಲೆಗೆ 8,493 ಮೇವಿನ ಬೀಜದ ಮಿನಿ ಕಿಟ್‌ಗಳನ್ನು ಹಂಚಿಕೆ ಮಾಡಲಾಗಿದ್ದು, ಈವರೆಗೆ 6,861 ಕಿಟ್‌ಗಳು ಸರಬರಾಜಾಗಿವೆ.

ಮೇವಿನ ಕೊರತೆ ಎದುರಿಸುತ್ತಿರುವ ಹಾಗೂ ನೀರಾವರಿ ಸೌಲಭ್ಯ ಹೊಂದಿರುವ, ಹಸಿರು ಮೇವು ಬೆಳೆಯಲು ಆಸಕ್ತಿ ಹೊಂದಿರುವ ರೈತರಿಗೆ ಪಶುವೈದ್ಯಕೀಯ ಸಂಸ್ಥೆಗಳ ಮೂಲಕ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಜಾನುವಾರುಗಳಿಗೆ ಹಸಿರು ಮೇವಿನ ಲಭ್ಯತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಇದಲ್ಲದೆ, ಧಾರವಾಡ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ 2026ರ ಜೂನ್ ತಿಂಗಳಲ್ಲಿ 12,972 ಕೆ.ಜಿ. ಮೇವಿನ ಬೀಜ ವಿತರಿಸಲಾಗಿದೆ. ಈ ಬೀಜಗಳನ್ನು ಬಿತ್ತನೆ ಮಾಡಿರುವ ರೈತರ ಹೊಲಗಳಲ್ಲಿ ಈಗಾಗಲೇ ಹಸಿರು ಮೇವು ಕಟಾವಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.

Leave a Reply

Your email address will not be published. Required fields are marked *