
ಧಾರವಾಡ :ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ಸಾರಿಗೆ ಸಂಸ್ಥೆಯ ಬಸ್ಗಳು ಸರಿಯಾದ ಸಮಯಕ್ಕೆ ಬಾರದೆ ಇರುವುದನ್ನು ಖಂಡಿಸಿ ಹಾಗೂ ನೂತನ ವೇಳಾಪಟ್ಟಿಯಂತೆ ತಕ್ಷಣವೇ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಸೋಮವಾರ ಗ್ರಾಮಸ್ಥರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಹುಬ್ಬಳ್ಳಿ ಬಸ್ ತಡೆದು ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿಯ ಹಠಮಾರಿ ಹಾಗೂ ನಿರ್ಲಕ್ಷ್ಯ ಧೋರಣೆಯನ್ನು ಕಟುವಾಗಿ ಖಂಡಿಸಿದರು. ಕಳೆದ 2025ರ ಏಪ್ರಿಲ್ 8 ರಂದು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾಗ, ಸಾರ್ವಜನಿಕರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಅದರಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಸೂಕ್ತ ವೇಳಾಪಟ್ಟಿ ತಯಾರಿಸಿ, ಹೆಬ್ಬಳ್ಳಿ-ಅಮ್ಮಿನಭಾವಿ ಮಾರ್ಗವಾಗಿ ಹೆಚ್ಚುವರಿ ಬಸ್ಗಳನ್ನು ಓಡಿಸುವುದು ಹಾಗೂ ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಹಳೆ ಬಸ್ ನಿಲ್ದಾಣದವರೆಗೆ ಬಸ್ ಸಂಚಾರ ಕಲ್ಪಿಸುವಂತೆ ಮೇ 5, 2025 ರಂದು ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ (ಡಿಸಿ) ಅಧಿಕೃತವಾಗಿ ಮನವಿ ಸಲ್ಲಿಸಲಾಗಿತ್ತು.

ಮನವಿ ಸಲ್ಲಿಸಿ ಅನೇಕ ತಿಂಗಳುಗಳು ಕಳೆದರೂ ಅಧಿಕಾರಿಗಳು ಈ ಬಗ್ಗೆ ಕನಿಷ್ಠ ಮುತವರ್ಜಿ ವಹಿಸದೆ, ಕೊಟ್ಟ ಭರವಸೆಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವುದು ಸಾರಿಗೆ ಸಂಸ್ಥೆಯ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಅಧಿಕಾರಿಗಳ ಈ ನಿದ್ರಾವಸ್ಥೆಯಿಂದಾಗಿ ಪ್ರತಿದಿನ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ತೀವ್ರ ಪರದಾಟ ಅನುಭವಿಸುವಂತಾಗಿದೆ. ಸಮಯಕ್ಕೆ ಸರಿಯಾಗಿ ಬಸ್ಗಳಿಲ್ಲದೆ ಕೆಲಸದ ಸ್ಥಳಗಳಿಗೆ ತಡವಾಗಿ ತಲುಪಿ ಮಾಲೀಕರಿಂದ ಬೈಗುಳ ತಿನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತೀವ್ರ ಖಂಡನೆ ವ್ಯಕ್ತಪಡಿಸಿ ಸ್ಥಳಕ್ಕೇ ಹಿರಿಯ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಾರಿಗೆ ನಿಯಂತ್ರಣಾಧಿಕಾರಿಗಳು, ಗ್ರಾಮಸ್ಥರ ಬೇಡಿಕೆಗಳನ್ನು ಹಿರಿಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಆದ್ಯತೆಯ ಮೇರೆಗೆ ಶೀಘ್ರವೇ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ಬಳಿಕ ಸಾರ್ವಜನಿಕರು ಪ್ರತಿಭಟನೆಯನ್ನು ಹಿಂಪಡೆದರು. ಸಾರಿಗೆ ಇಲಾಖೆ ಇನ್ನಾದರೂ ಎಚ್ಚೆತ್ತು ಕೊಟ್ಟ ಮಾತಿನಂತೆ ನೂತನ ವೇಳಾಪಟ್ಟಿಯಂತೆ ಬಸ್ ಓಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತದೆಯಾ ಕಾದು ನೋಡಬೆಕಿದೆ..

