
ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮಗಳಲ್ಲಿ ಎಟಿಎಂಗಳಿಗೆ ಕನ್ನ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಎರಡೂ ಎಟಿಎಂಗಳಿಂದ ಅಂದಾಜು ₹14 ಲಕ್ಷಕ್ಕೂ ಅಧಿಕ ಹಣ ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ ಲಾಕ್ ಮುರಿದು ಒಳನುಗ್ಗಿದ ಕಳ್ಳರು, ಅಂದಾಜು ₹3 ಲಕ್ಷಕ್ಕೂ ಅಧಿಕ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಎಟಿಎಂಗೆ ನುಗ್ಗಿರುವ ಕಳ್ಳರು, ಹಣ ದೋಚಿದ ಬಳಿಕ ಎಟಿಎಂನ ಮುಂಭಾಗ ಹಾಗೂ ಒಳಭಾಗದಲ್ಲಿದ್ದ ಬಹುತೇಕ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ.
ಇದೇ ವೇಳೆ ತಾಲೂಕಿನ ಸುಳ್ಳ ಗ್ರಾಮದಲ್ಲೂ ಎಟಿಎಂ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸುಳ್ಳ ಗ್ರಾಮದ ನಡುಊರಿನಲ್ಲೇ ಎಟಿಎಂ ಇದ್ದರೂ ಕಳ್ಳರು ಕೃತ್ಯ ಎಸಗಿದ್ದು, ಅಂದಾಜು ₹11 ಲಕ್ಷ ಹಣ ದೋಚಲಾಗಿದೆ ಎಂದು ತಿಳಿದುಬಂದಿದೆ. ಎಟಿಎಂ ಅನ್ನು ಪೂರ್ಣವಾಗಿ ಗುರಿಯಾಗಿಸಿಕೊಂಡೇ ಕಳ್ಳತನ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಎರಡೂ ಘಟನೆಗಳ ಮಾಹಿತಿ ತಿಳಿಯುತ್ತಿದ್ದಂತೆ ಇನ್ಸ್‌ಪೆಕ್ಟರ್ ಮುರಗೇಶ ಚೆನ್ನಣ್ಣನವರ ನೇತೃತ್ವದಲ್ಲಿ ಪೊಲೀಸರು ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.
ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಕಳ್ಳರ ಪತ್ತೆಗೆ ಕ್ರಮ ಮುಂದುವರಿಸಿದ್ದಾರೆ. ಕಳುವಾದ ಹಣದ ನಿಖರ ಮೊತ್ತ ಹಾಗೂ ಕಳ್ಳತನದ ಸಂಪೂರ್ಣ ವಿವರಗಳು ಪೊಲೀಸ್ ಮೂಲಗಳಿಂದ ಇನ್ನಷ್ಟೇ ಖಚಿತವಾಗಬೇಕಿದೆ.

