
ವರದಿ: ಕಾರ್ತಿಕ್ ಗೌಡ, ಹನೂರು
ಚಾಮರಾಜನಗರ: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಹೊಳೆಮುರಿದಟ್ಟಿ ಕರಿಕಲ್ಲು ಗುಡ್ಡದಲ್ಲಿ ಆಗಸ್ಟ್ 15ರಂದು ನಡೆದ ಶೂಟ್‌ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ರಕ್ಷಕ ಶಿವರಾಜ್ ಸಾಸಲವಾಡೆ ಹಾಗೂ ವಾಚರ್‌ಗಳಾದ ಶಿವಲಿಂಗ ನಾಯ್ಕ ಮತ್ತು ಗಿರೀಶ್ ಅವರಿಗೆ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆಗಸ್ಟ್ 15ರ ಮುಂಜಾನೆ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹೊಳೆಮುರಿದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮರಿಯಮಂಗಲ ಗ್ರಾಮದ ಅಂತೋಣಿಸ್ವಾಮಿ, ಲಾಸರ್ ದೊಡ್ಡಿ ಗ್ರಾಮದ ಡೇವಿಡ್ ಕುಮಾರ್ ಹಾಗೂ ಜಗನ್ನಾಥ್ ದೊಡ್ಡಿ ಗ್ರಾಮದ ಜಾನ್ ರೋಸ್ ಪೀಟರ್ ಮೃತಪಟ್ಟಿದ್ದರು. ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ಸಿಐಡಿ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದ ತಂಡವು ಹನೂರು, ರಾಮಾಪುರ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿದೆ.
ಅರಣ್ಯ ಇಲಾಖೆಯ ಪ್ರಕಾರ, ನಾಲ್ವರು ಕಾವೇರಿ ವನ್ಯಜೀವಿಧಾಮಕ್ಕೆ ಅಕ್ರಮವಾಗಿ ಪ್ರವೇಶಿಸಿ ಬೇಟೆಯಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಎರಡು ವಿಶೇಷ ತಂಡಗಳನ್ನು ರಚಿಸಿ ಗಸ್ತು ನಡೆಸಲಾಗುತ್ತಿತ್ತು. ಮುಂಜಾನೆ ಸುಮಾರು 5 ಗಂಟೆಗೆ ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳನ್ನು ಗುರುತಿಸಿದ ಅರಣ್ಯ ಸಿಬ್ಬಂದಿ ಶರಣಾಗುವಂತೆ ಸೂಚಿಸಿದಾಗ, ಅವರು ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು. ಈ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿದಾಳಿ ನಡೆಸಬೇಕಾಯಿತು ಎಂದು ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಘಟನೆಗೆ ಸಂಬಂಧಿಸಿದಂತೆ ಸಿಐಡಿ ಎಸ್‌ಪಿ ಉಮಾ ಪ್ರಶಾಂತ್, ಡಿವೈಎಸ್‌ಪಿಗಳಾದ ಮೇರಿ ಶೈಲಜಾ ಹಾಗೂ ವೈ.ಎಸ್. ಜಹಗಿರ್ದಾರ್ ಸೇರಿದಂತೆ ಅಧಿಕಾರಿಗಳ ತಂಡ ಕಳೆದ ಹತ್ತು ದಿನಗಳಿಂದ ತನಿಖೆ ನಡೆಸುತ್ತಿದೆ. ಗುಂಡು ಹಾರಿಸಿದ್ದಾರೆ ಎನ್ನಲಾದ ಅರಣ್ಯ ರಕ್ಷಕ ಶಿವರಾಜ್ ಸಾಸಲವಾಡೆ, ವಾಚರ್‌ಗಳಾದ ಶಿವಲಿಂಗ ನಾಯ್ಕ ಮತ್ತು ಗಿರೀಶ್ ಸೇರಿದಂತೆ ಇತರೆ ಸಿಬ್ಬಂದಿಯನ್ನೂ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಈ ಮಧ್ಯೆ ಮೂವರು ಆರೋಪಿಗಳು ವಕೀಲ ರವಿ ರಾಘವೇಂದ್ರ ಅವರ ಮೂಲಕ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಜಾಮೀನು ನೀಡದಂತೆ ತಕರಾರು ಅರ್ಜಿ ಸಲ್ಲಿಸುವುದಾಗಿ ಸಿಐಡಿ ಅಧಿಕಾರಿಗಳು ಪತ್ರಕರ್ತರಿಗೆ ತಿಳಿಸಿದ್ದರು ಎನ್ನಲಾಗಿದ್ದು, ಮಂಗಳವಾರ ನ್ಯಾಯಾಲಯ ಮೂವರಿಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಬೇಟೆಯಾಡಲು ತೆರಳಿದ್ದವರಿಗೆ ಶರಣಾಗುವಂತೆ ಸೂಚಿಸಿದರೂ ಅವರು ಶರಣಾಗದೆ ಗುಂಡಿನ ದಾಳಿ ನಡೆಸಿದ್ದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂಬ ವಾದದ ಹಿನ್ನೆಲೆಯಲ್ಲಿ ಜಾಮೀನು ದೊರೆತಿದೆ ಎನ್ನಲಾಗಿದೆ. ಆದರೆ, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರೆ ನಿರೀಕ್ಷಣಾ ಜಾಮೀನು ಪಡೆಯುವ ಅಗತ್ಯವೇನಿತ್ತು ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಮೂವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಮೂವರ ಜಾಮೀನು ಅರ್ಜಿಗೆ ಸಿಐಡಿ ಅಧಿಕಾರಿಗಳು ನಿಜವಾಗಿಯೂ ತಕರಾರು ಸಲ್ಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ತಕರಾರು ಸಲ್ಲಿಸಿದ್ದರೂ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದರ ಕುರಿತು ಹಲವು ಪ್ರಶ್ನೆಗಳು ಮೂಡಿವೆ. ಪ್ರಕರಣದ ಸತ್ಯಾಸತ್ಯತೆ ಸಿಐಡಿ ತನಿಖೆಯಿಂದಷ್ಟೇ ಹೊರಬರಬೇಕಿದೆ.
ಅರಣ್ಯ ಸಿಬ್ಬಂದಿ ಪರ ಹಿರಿಯ ವಕೀಲ ರಾಘವೇಂದ್ರ ಅವರು ಮಾತನಾಡಿ, ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಬೇಟೆಯಾಡಲು ತೆರಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಕರಣದ ತನಿಖೆ ಪ್ರಸ್ತುತ ನಡೆಯುತ್ತಿದ್ದು, ಸರ್ಕಾರಕ್ಕೆ ಅಂತಿಮ ವರದಿ ಇನ್ನೂ ಸಲ್ಲಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ ಎಂದು ತಿಳಿಸಿದ್ದಾರೆ.

