ಹನೂರು ಬಫರ್ ವಲಯದಲ್ಲಿ ಜಿಂಕೆ ಬೇಟೆ: ಎದೆಯ ಭಾಗ, ಎರಡು ಮುಂಗಾಲು ಕತ್ತರಿಸಿ ಪರಾರಿ; ಪ್ರಕರಣ ದಾಖಲು

Spread the love

ಹನೂರು ಬಫರ್ ವಲಯದಲ್ಲಿ ಜಿಂಕೆ ಬೇಟೆ: ಎದೆಯ ಭಾಗ, ಎರಡು ಮುಂಗಾಲು ಕತ್ತರಿಸಿ ಪರಾರಿ; ಪ್ರಕರಣ ದಾಖಲು

ವರದಿ: ಕಾರ್ತಿಕ್ ಗೌಡ, ಹನೂರು

ಹನೂರು: ಕರಿಕಲ್ಲು ಗುಡ್ಡ ಶೂಟ್‌ಔಟ್ ಪ್ರಕರಣದ ಬೆನ್ನಲ್ಲೇ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಬೇಟೆಗಾರರ ಹಾವಳಿ ಮತ್ತೆ ಹೆಚ್ಚಾಗಿದೆ. ಹನೂರು ಬಫರ್ ವಲಯದಲ್ಲಿ ಗಂಡು ಜಿಂಕೆಯೊಂದನ್ನು ಗುಂಡು ಹಾರಿಸಿ ಕೊಂದು, ಅದರ ಎದೆಯ ಭಾಗ ಹಾಗೂ ಎರಡು ಮುಂಗಾಲುಗಳನ್ನು ಕತ್ತರಿಸಿಕೊಂಡು ಬೇಟೆಗಾರರು ಪರಾರಿಯಾಗಿರುವ ಘಟನೆ ನಡೆದಿದೆ.

ಹನೂರು ವನ್ಯಜೀವಿ ಉಪವಿಭಾಗದ ಪಚ್ಚೆದೊಡ್ಡಿ ಶಾಖೆಯ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 7ರ ರಾತ್ರಿ ಉಪವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಗಸ್ತು ನಡೆಸುತ್ತಿದ್ದ ವೇಳೆ ಗುಂಡಿನ ಶಬ್ದ ಕೇಳಿಸಿದೆ. ಕೂಡಲೇ ಸಿಬ್ಬಂದಿ ಶಬ್ದ ಬಂದ ದಿಕ್ಕಿನಲ್ಲಿ ತೆರಳಿ ಪರಿಶೀಲನೆ ನಡೆಸಿದರೂ ಯಾರೂ ಪತ್ತೆಯಾಗಿರಲಿಲ್ಲ.

ಸೆಪ್ಟೆಂಬರ್ 8ರ ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದಾಗ ಎದೆಯ ಭಾಗ ಹಾಗೂ ಎರಡು ಮುಂಗಾಲುಗಳನ್ನು ಕತ್ತರಿಸಲಾಗಿದ್ದ ಗಂಡು ಜಿಂಕೆಯ ಮೃತದೇಹ ಪತ್ತೆಯಾಗಿದೆ. ಬಳಿಕ ಸ್ಥಳ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು, ಜಿಂಕೆಯನ್ನು ಗುಂಡು ಹಾರಿಸಿ ಕೊಂದು ಅದರ ಮಾಂಸಕ್ಕಾಗಿ ದೇಹದ ಪ್ರಮುಖ ಭಾಗಗಳನ್ನು ಕತ್ತರಿಸಿಕೊಂಡು ಹೋಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಅರಣ್ಯ ಇಲಾಖೆ ವನ್ಯಜೀವಿ ಅಪರಾಧ ವರದಿ (WLOR) ದಾಖಲಿಸಿಕೊಂಡಿದ್ದು, ಬೇಟೆಗಾರರ ಪತ್ತೆಗೆ ತನಿಖೆ ಚುರುಕುಗೊಳಿಸಿದೆ. ಆರೋಪಿಗಳ ಸುಳಿವು ಪತ್ತೆಹಚ್ಚಲು ಅರಣ್ಯ ಸಿಬ್ಬಂದಿ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಐದು ದಿನದ ಹಿಂದಷ್ಟೇ ಕಡವೆ ಬೇಟೆ

ಇದೇ ಹನೂರು ವಲಯದ ಉಡುತೊರೆಹಳ್ಳ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಸೆಪ್ಟೆಂಬರ್ 3ರಂದು ಕಡವೆ ಬೇಟೆಯಾಡಿದ್ದ ಘಟನೆ ನಡೆದಿತ್ತು. ನೀರು ಕುಡಿಯಲು ಬಂದಿದ್ದ ಕಡವೆಯ ಮೇಲೆ ನಾಡಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದ ದುಷ್ಕರ್ಮಿಗಳು, ಮೃತದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ ಚೀಲಗಳಲ್ಲಿ ತುಂಬಿಕೊಂಡು ಸಾಗುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಮಾಂಸದ ಚೀಲಗಳನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.

ಈ ಘಟನೆ ನಡೆದು ಕೇವಲ ಐದು ದಿನಗಳಲ್ಲೇ ಹನೂರು ಬಫರ್ ವಲಯದಲ್ಲಿ ಮತ್ತೊಂದು ವನ್ಯಜೀವಿ ಬೇಟೆ ಪ್ರಕರಣ ಬೆಳಕಿಗೆ ಬಂದಿರುವುದು ವನ್ಯಜೀವಿ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಪ್ರದೇಶದಲ್ಲಿ ಬೇಟೆಗಾರರ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಗಸ್ತು ಹಾಗೂ ಕೂಂಬಿಂಗ್ ಕಾರ್ಯಾಚರಣೆಯನ್ನು ಮತ್ತಷ್ಟು ಬಿಗಿಗೊಳಿಸಬೇಕೆಂಬ ಆಗ್ರಹ ಕೇಳಿಬಂದಿದೆ.

Leave a Reply

Your email address will not be published. Required fields are marked *