ಬುದ್ಧನ ಶಾಂತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶ ವಿಶ್ವಕ್ಕೆ ದಾರಿದೀಪ: ಶಾಸಕ ಎಂ.ಆರ್. ಮಂಜುನಾಥ್

Spread the love

ಬುದ್ಧನ ಶಾಂತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶ ವಿಶ್ವಕ್ಕೆ ದಾರಿದೀಪ: ಶಾಸಕ ಎಂ.ಆರ್. ಮಂಜುನಾಥ್

ವರದಿ: ಕಾರ್ತಿಕ್ ಗೌಡ, ಹನೂರು

ಹನೂರು: ಗೌತಮ ಬುದ್ಧರು ಸಾರಿದ ಶಾಂತಿ, ಸಮಾನತೆ, ಕರುಣೆ ಹಾಗೂ ಮಾನವೀಯತೆಯ ಸಂದೇಶಗಳು ಇಡೀ ವಿಶ್ವಕ್ಕೆ ದಾರಿದೀಪವಾಗಿವೆ ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ಹನೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ‘ದಮ್ಮ ಪಯಣ’ ಜಾಗೃತಿ ಜಾಥಾದ ರಥಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗೌತಮ ಬುದ್ಧರು ಸಾರಿದ ಶಾಂತಿ, ಸಮಾನತೆ, ಕರುಣೆ ಹಾಗೂ ಮಾನವೀಯತೆಯ ಮೌಲ್ಯಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದರು.

ಅಕ್ಟೋಬರ್ 24 ಮತ್ತು 25ರಂದು ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಅಂತರರಾಷ್ಟ್ರೀಯ ಬುದ್ಧ ಸಮ್ಮೇಳನ ಆಯೋಜಿಸಿರುವುದು ಸಂತಸದ ವಿಚಾರವಾಗಿದೆ. ಬುದ್ಧನ ತತ್ವಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೆ, ಇಡೀ ಮಾನವಕುಲದ ಒಳಿತನ್ನು ಬಯಸುವ ಸಾರ್ವತ್ರಿಕ ಸಂದೇಶವನ್ನು ಹೊಂದಿವೆ. ದ್ವೇಷ, ಅಸಮಾನತೆ ಹಾಗೂ ಸಂಘರ್ಷಗಳಿಂದ ದೂರವಾಗಿ ಶಾಂತಿ ಮತ್ತು ಸಹಬಾಳ್ವೆಯ ಸಮಾಜ ನಿರ್ಮಿಸಲು ಬುದ್ಧನ ವಿಚಾರಧಾರೆ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ಯುವ ಪೀಳಿಗೆ ಬುದ್ಧನ ಜೀವನ ಹಾಗೂ ಬೋಧನೆಗಳನ್ನು ಅರಿತುಕೊಂಡು ಕರುಣೆ, ಸಹನೆ, ಸತ್ಯ, ಅಹಿಂಸೆ ಹಾಗೂ ಸಾಮಾಜಿಕ ಹೊಣೆಗಾರಿಕೆಯಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಎಲ್ಲರೂ ಪರಸ್ಪರ ಗೌರವದಿಂದ ಹಾಗೂ ಸಾಮರಸ್ಯದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಕರೆ ನೀಡಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಬೌದ್ಧ ಧರ್ಮದ ತತ್ವಗಳು ಹಾಗೂ ಮಾನವೀಯ ಮೌಲ್ಯಗಳ ಕುರಿತು ಚರ್ಚೆ ನಡೆಯುತ್ತಿರುವುದು ಸಂತಸದ ವಿಚಾರವಾಗಿದೆ. ಇಂತಹ ಸಮ್ಮೇಳನಗಳು ವಿವಿಧ ದೇಶಗಳು ಹಾಗೂ ಸಮುದಾಯಗಳ ನಡುವೆ ಶಾಂತಿ, ಸೌಹಾರ್ದತೆ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ, ಬಂತೇಜಿ ಸ್ವಾಮೀಜಿ, ವಿಶ್ವ ಚೇತನ ಟ್ರಸ್ಟ್ ಅಧ್ಯಕ್ಷೆ ಪ್ರೇಮಲತಾ ಕೃಷ್ಣಸ್ವಾಮಿ, ವೆಂಕಟರಮಣ, ಶಿವಮಲ್ಲು (ಪಾಪ) ಸಿದ್ದರಾಜು, ಕಿರಣ್ ಕುಮಾರ್, ಬಸವರಾಜು, ಮಂಜೇಶ್ ಗೌಡ, ರವೀಂದ್ರ, ಯಜಮಾನರಾದ ಆರ್. ಮಾದೇಶ್, ಮಹದೇವಸ್ವಾಮಿ, ಪುಟ್ಟರಾಜು, ಚಂದ್ರು, ಮಹಾದೇವಯ್ಯ, ಸಿ. ಲಿಂಗರಾಜು, ಮುಖಂಡರಾದ ಎನ್. ಸಿದ್ದರಾಜು ಸೇರಿದಂತೆ ಮಹಿಳೆಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *