ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ ಎಕ್ಸ್‌ಪೈರಿ ಮಾತ್ರೆ ವಿತರಣೆ: ಸಿಬ್ಬಂದಿ ವಿರುದ್ಧ ಮಾಬುಸಾಬ ಯರಗುಪ್ಪಿ ಆಕ್ರೋಶ, ಅಮಾನತಿಗೆ ಆಗ್ರಹ

Spread the love

ನವಲಗುಂದ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಭೀಕರ ಕರ್ತವ್ಯ ಲೋಪವೊಂದು ಬೆಳಕಿಗೆ ಬಂದಿದ್ದು, ರೋಗಿಯೊಬ್ಬರಿಗೆ ಅವಧಿ ಮುಗಿಯುವ ಮಾತ್ರೆಗಳನ್ನು ವಿತರಿಸಿ ಜೀವದೊಂದಿಗೆ ಚೆಲ್ಲಾಟವಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ತಾಲೂಕು ಆಸ್ಪತ್ರೆಯ ಫಾರ್ಮಸಿ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಮಕ್ತುಮಸಾಬ ಅಲ್ಲಿಬಾಯಿ ಎಂಬುವವರಿಗೆ ಮುಂದಿನ ತಿಂಗಳು ಅಕ್ಟೋಬರ್ 7ರವರೆಗೆ ನಿರಂತರವಾಗಿ ಬಳಸಲು ‘ಮೆಟ್‌ಫಾರ್ಮಿನ್ 1000 ಮಿಗ್ರಾಂ’ ಮಾತ್ರೆಗಳನ್ನು ನೀಡಲಾಗಿತ್ತು. ಆದರೆ, ಸಿಬ್ಬಂದಿ ಸರಿಯಾಗಿ ಗಮನಿಸದೇ ಸೆಪ್ಟೆಂಬರ್ 2026ಕ್ಕೇ ಅವಧಿ ಮುಗಿಯುವ ಮಾತ್ರೆಗಳನ್ನು ರೋಗಿಯ ಕೈಗಿಟ್ಟಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಆಸ್ಪತ್ರೆಯ ಸಿಬ್ಬಂದಿಯನ್ನು ನಂಬಿ ರೋಗಿಯು ಏನಾದರೂ ಅಕ್ಟೋಬರ್ ತಿಂಗಳಿನಲ್ಲೂ ಇದೇ ಎಕ್ಸ್‌ಪೈರಿ ಮಾತ್ರೆಗಳನ್ನು ಸೇವಿಸಿದ್ದರೆ ಲಿವರ್ ಹಾಗೂ ಕಿಡ್ನಿ ವೈಫಲ್ಯದಂತಹ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ರೋಗಿಯು ಮಾತ್ರೆಯ ಲೇಬಲ್ ಗಮನಿಸಿದ್ದರಿಂದ ದೊಡ್ಡ ಗಂಡಾಂತರ ತಪ್ಪಿದಂತಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಡವರ ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದ್ದು, ಸಿಬ್ಬಂದಿಗಳು ರೋಗಿಗಳ ಜೀವದೊಂದಿಗೆ ಮಾಡುತ್ತಿರುವ ಕ್ರಿಮಿನಲ್ ಚೆಲ್ಲಾಟ ಇದಾಗಿದೆ.

ಆದ್ದರಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಈ ಕರ್ತವ್ಯ ಲೋಪ ಎಸಗಿದ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಆಸ್ಪತ್ರೆಯ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಾಬುಸಾಬ ಯರಗುಪ್ಪಿ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *