
ಧಾರವಾಡ: ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್. ಕೋನರಡ್ಡಿ ಅವರು ತಮ್ಮ ಅಧಿಕಾರ ಬಲ ಬಳಸಿಕೊಂಡು ನಿಯಮಬಾಹಿರವಾಗಿ ಪೊಲೀಸ್ ಎಸ್ಕಾರ್ಟ್ (ಬೆಂಗಾವಲು) ವಾಹನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಅವರು ನಡೆಸುತ್ತಿರುವ ಕಾನೂನು ಹೋರಾಟ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಶಾಸಕರ ವಿರುದ್ಧ ಕರ್ನಾಟಕ ಲೋಕಾಯುಕ್ತ ಹಾಗೂ ಮಾನವ ಹಕ್ಕುಗಳ ಆಯೋಗದಲ್ಲಿ ಅಧಿಕೃತವಾಗಿ ದೂರುಗಳು ದಾಖಲಾಗಿವೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ, ಶಾಸಕ ಎನ್.ಎಚ್. ಕೋನರಡ್ಡಿ ಅವರು ನಿಯಮಬಾಹಿರವಾಗಿ ಪೊಲೀಸ್ ಎಸ್ಕಾರ್ಟ್ ಬಳಸಿಕೊಂಡಿರುವ ಕುರಿತು ಈ ಹಿಂದೆ ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ (DGP) ದೂರು ಸಲ್ಲಿಸಲಾಗಿತ್ತು. ಆದರೆ, ಉನ್ನತ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದೀಗ ನ್ಯಾಯಕ್ಕಾಗಿ ತನಿಖಾ ಸಂಸ್ಥೆಗಳ ಮೊರೆ ಹೋಗಲಾಗಿದೆ ಎಂದು ತಿಳಿಸಿದ್ದಾರೆ.
ಲೋಕಾಯುಕ್ತದಲ್ಲಿ ಲೋಕ್/ಬಿಜಿಎಮ್/5349/2026 ಹಾಗೂ ಮಾನವ ಹಕ್ಕುಗಳ ಆಯೋಗದಲ್ಲಿ 3554/10/10/2026-G ಪ್ರಕರಣ ಸಂಖ್ಯೆಗಳಲ್ಲಿ ದೂರು ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಿಯಮಬಾಹಿರವಾಗಿ ಶಾಸಕರ ಬೆಂಗಾವಲಿಗೆ ಬಳಸಲಾಗಿದೆ ಎನ್ನಲಾದ ಪೊಲೀಸ್ ವಾಹನಕ್ಕೆ ಸಂಬಂಧಿಸಿದ ಡೀಸೆಲ್ ವೆಚ್ಚ, ಆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಯ ವೇತನ, ವಾಹನದ ರಿಪೇರಿ ಹಾಗೂ ಸವಕಳಿ ಸೇರಿದಂತೆ ಸರ್ಕಾರಕ್ಕೆ ಉಂಟಾಗಿರುವ ಸಂಪೂರ್ಣ ವೆಚ್ಚವನ್ನು ಶಾಸಕರಿಂದಲೇ ವಸೂಲಿ ಮಾಡಿ ಸರ್ಕಾರದ ಖಜಾನೆಗೆ ಜಮೆ ಮಾಡಿಸಬೇಕು ಎಂದು ಯರಗುಪ್ಪಿ ಆಗ್ರಹಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣ ಹಾಗೂ ಸರ್ಕಾರಿ ಅಧಿಕಾರಿಗಳನ್ನು ವೈಯಕ್ತಿಕ ಪ್ರತಿಷ್ಠೆಗಾಗಿ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪು ಸಾಬೀತಾದಲ್ಲಿ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಜನಪ್ರತಿನಿಧಿಗಳು ಕಾಯ್ದೆ-ಕಾನೂನುಗಳಿಗೆ ಬದ್ಧರಾಗಿರಬೇಕು. ಸಾರ್ವಜನಿಕ ಹಣದ ದುರ್ಬಳಕೆ ತಡೆಗಟ್ಟುವ ಹಾಗೂ ಭ್ರಷ್ಟಾಚಾರದ ವಿರುದ್ಧದ ಈ ಕಾನೂನು ಹೋರಾಟವನ್ನು ತಾರ್ಕಿಕ ಅಂತ್ಯ ಕಾಣುವವರೆಗೆ ಮುಂದುವರಿಸಲಾಗುವುದು ಎಂದು ಮಾಬುಸಾಬ ಯರಗುಪ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

