74ರ ವಯಸ್ಸಿನಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ವೃದ್ಧೆ..! ವೈದ್ಯಕೀಯ ಲೋಕವೇ ಬೆರಗು

Spread the love

ಆಂಧ್ರಪ್ರದೇಶ: ವೈದ್ಯಕೀಯ ಲೋಕವೇ ಅಚ್ಚರಿಪಡುವಂತಹ ಅಪರೂಪದ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. 74 ವರ್ಷದ ವೃದ್ಧೆಯೊಬ್ಬರು ಐವಿಎಫ್‌ (IVF) ತಂತ್ರಜ್ಞಾನದ ನೆರವಿನಿಂದ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪರ್ತಿಪಡು ಗ್ರಾಮದ ನಿವಾಸಿ ಮಂಗಾಯಮ್ಮ (74) ಹಾಗೂ ಅವರ ಪತಿ ಇ. ರಾಜಾರಾವ್ (82) ಈ ಅಪರೂಪದ ಸಾಧನೆ ಮಾಡಿದ ದಂಪತಿಯಾಗಿದ್ದಾರೆ.

1962ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಬರೋಬ್ಬರಿ 57 ವರ್ಷಗಳ ಕಾಲ ಮಕ್ಕಳಾಗಿರಲಿಲ್ಲ. ಸಮಾಜದ ಹಲವು ಟೀಕೆ ಹಾಗೂ ನಿಂದನೆಗಳನ್ನು ಎದುರಿಸುತ್ತಲೇ ಬಂದಿದ್ದ ದಂಪತಿ, ಕೊನೆಗೂ ತಾಯ್ತನದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮಕ್ಕಳಿಗಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದ ಮಂಗಾಯಮ್ಮ ಅವರಿಗೆ ಐವಿಎಫ್‌ ತಂತ್ರಜ್ಞಾನದ ಮೂಲಕ ಗರ್ಭಧಾರಣೆ ಮಾಡಲಾಗಿತ್ತು.

ಗುಂಟೂರಿನ ಅಹಲ್ಯಾ ನರ್ಸಿಂಗ್ ಹೋಮ್‌ನಲ್ಲಿ ಡಾ. ಉಮಾಶಂಕರ್ ನೇತೃತ್ವದ ವೈದ್ಯರ ತಂಡ ಮಂಗಾಯಮ್ಮ ಅವರಿಗೆ ಐವಿಎಫ್‌ ಚಿಕಿತ್ಸೆ ನೀಡಿತ್ತು. ವಯಸ್ಸಿನ ಕಾರಣದಿಂದ ವೈದ್ಯರು ವಿಶೇಷ ಮುನ್ನೆಚ್ಚರಿಕೆ ವಹಿಸಿದ್ದು, ಅಂತಿಮವಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಅವಳಿ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ.

ಸದ್ಯ ಮಂಗಾಯಮ್ಮ ಹಾಗೂ ಅವರ ಅವಳಿ ಹೆಣ್ಣು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 2016ರಲ್ಲಿ ಪಂಜಾಬ್‌ನ 72 ವರ್ಷದ ದಲ್ಜಿಂದರ್ ಕೌರ್ ಅವರು ಮಗುವಿಗೆ ಜನ್ಮ ನೀಡಿದ್ದ ಘಟನೆ ವಿಶ್ವದಾದ್ಯಂತ ಸುದ್ದಿಯಾಗಿತ್ತು. ಇದೀಗ 74ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಮಂಗಾಯಮ್ಮ ಅವರ ಪ್ರಕರಣ ಮತ್ತೊಮ್ಮೆ ವೈದ್ಯಕೀಯ ಲೋಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *