ಗದಗ:ಅಕ್ರಮ ಸಂಬಂಧದ ಅಂಧಾಭಿಮಾನಕ್ಕೆ ಬಲಿಯಾಯ್ತಾ ಜೀವ? ಹಳೇ ಪ್ರೇಯಸಿಗೆ ಸನ್ನೆ ಮಾಡಿದ ಯುವಕನ ಬರ್ಬರ ಹತ್ಯೆ!

Spread the love

ಗದಗ: ಅಕ್ರಮ ಸಂಬಂಧ ಅನ್ನೋದು ನಿಧಾನವಾಗಿ ಮೈಯೆಲ್ಲಾ ಆವರಿಸೋ ವಿಷವಿದ್ದಂತೆ. ಕ್ಷಣಿಕ ಸುಖದ ಆಸೆಗೆ ಬಿದ್ದವರು ಕೊನೆಗೆ ಸರ್ವಸ್ವವನ್ನೂ ಕಳೆದುಕೊಳ್ಳಬೇಕಾಗುತ್ತದೆ ಅನ್ನೋದಕ್ಕೆ ಗದಗದಲ್ಲಿ ನಡೆದಿರುವ ಈ ಭೀಕರ ಘಟನೆಯೇ ಸಾಕ್ಷಿ. ಬೇಡವೆಂದು ದೂರ ಸರಿದರೂ ಬೆನ್ನುಬಿಡದ ಹಳೆ ಚಾಳಿ, ಕೊನೆಗೆ ಒಬ್ಬ ಯುವಕನ ಪ್ರಾಣವನ್ನೇ ಬಲಿ ಪಡೆದಿದೆ.

ಮೋಹದ ಬಲೆಗೆ ಬಿದ್ದಿದ್ದ ವಿವಾಹಿತೆ:
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮದ ನಿವಾಸಿ ಈರಣ್ಣ ಅಗಶಿಬಾಗಿಲು ಎಂಬಾತ ವೃತ್ತಿಯಲ್ಲಿ ಕುರಿಗಾಹಿ. ಈತನ ಮನೆ ಎದುರಿಗಿದ್ದ ರೇಣುಕಾ ಎಂಬಾಕೆಯೊಂದಿಗೆ ಈತನಿಗೆ ಅನೈತಿಕ ಸಂಬಂಧ ಬೆಳೆದಿತ್ತು. ಮದುವೆಯಾಗಿ ಐದು ವರ್ಷ ಕಳೆದಿದ್ದರೂ ರೇಣುಕಾ ಈರಣ್ಣನ ಪ್ರೇಮಪಾಶಕ್ಕೆ ಬಿದ್ದಿದ್ದಳು. ಇಬ್ಬರ ನಡುವಿನ ಈ ಕಳ್ಳಾಟದ ವಿಷಯ ಮನೆಯವರಿಗೆ ತಿಳಿಯುತ್ತಿದ್ದಂತೆ ದೊಡ್ಡ ರಂಪಾಟವೇ ನಡೆದಿತ್ತು. ಕೊನೆಗೆ ಗ್ರಾಮಸ್ಥರೆಲ್ಲಾ ಸೇರಿ ರಾಜಿ ಪಂಚಾಯಿತಿ ನಡೆಸಿ, ಇಬ್ಬರನ್ನೂ ದೂರವಿರಿಸಿದ್ದರು.

ಅಂತರ ಕಾಯ್ದುಕೊಂಡರೂ ಬಿಡದ ಚಾಳಿ:
ಪಂಚಾಯಿತಿ ಬಳಿಕ ರೇಣುಕಾ ಈರಣ್ಣನಿಂದ ದೂರ ಉಳಿದಿದ್ದಳು. ಆದರೆ, ಈರಣ್ಣನಿಗೆ ಮಾತ್ರ ಆಕೆಯ ಮೇಲಿನ ವ್ಯಾಮೋಹ ಕಡಿಮೆಯಾಗಿರಲಿಲ್ಲ. ಎದುರಿಗೆ ಸಿಕ್ಕಾಗಲೆಲ್ಲಾ ಆಕೆಗೆ ಸನ್ನೆ ಮಾಡುವುದು, ಕಣ್ಣು ಹೊಡೆಯುವುದು ಮಾಡುತ್ತಿದ್ದ ಎನ್ನಲಾಗಿದೆ.

ರಾತ್ರೋರಾತ್ರಿ ಮನೆಗೆ ನುಗ್ಗಿ ದಾಳಿ:
ನಿನ್ನೆ ಸಂಜೆ ಎಂದಿನಂತೆ ಕುರಿ ಮೇಯಿಸಿಕೊಂಡು ಬಂದ ಈರಣ್ಣ, ರೇಣುಕಾ ಕಂಡ ತಕ್ಷಣ ಮತ್ತೆ ಸನ್ನೆ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ರೇಣುಕಾ, ನೇರವಾಗಿ ತನ್ನ ಮನೆಯವರಿಗೆ ಹಾಗೂ ಗಂಡನ ಕಡೆಯವರಿಗೆ ವಿಷಯ ತಿಳಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು, ರಾತ್ರಿ ವೇಳೆ ನಿದ್ದೆಯಲ್ಲಿದ್ದ ಈರಣ್ಣನ ಮನೆಗೆ ಏಕಾಏಕಿ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಈರಣ್ಣ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ನಾಲ್ವರ ಬಂಧನ:
ಈರಣ್ಣನ ತಾಯಿ ಗಿರಿಜಮ್ಮ ಹಾಗೂ ಸಹೋದರ ಸಂತೋಷ್ ಅವರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಒಂದು ಕ್ಷಣಿಕ ಆಸೆ ಇಡೀ ಕುಟುಂಬವನ್ನೇ ಬೀದಿಗೆ ತಂದು ನಿಲ್ಲಿಸಿದೆ. ಅಕ್ರಮ ಸಂಬಂಧದ ಬೆಂಕಿಗೆ ಯುವಕನೊಬ್ಬ ಪ್ರಾಣ ಕಳೆದುಕೊಂಡರೆ, ಆಕ್ರೋಶದಲ್ಲಿ ಕೊಲೆ ಮಾಡಿದವರು ಜೈಲು ಸೇರುವಂತಾಗಿದೆ.

Leave a Reply

Your email address will not be published. Required fields are marked *