ಡಾವಣಗೇರಿ:ಅಪ್ಪ ನದಿಯ ಪಾಲು, ಅಮ್ಮ ಜೈಲು ಪಾಲು: ಅಕ್ರಮ ಸಂಬಂಧದ ಅಮಲಿಗೆ ಬಲಿಯಾದ ಮುಗ್ಧ ಸಂಸಾರ!

Spread the love

ಡಾವಣಗೇರಿ: ಶಾಲೆಯ ಯೂನಿಫಾರ್ಮ್ ಕಳಚದೆ, ಅಜ್ಜಿಯ ಎದೆಗಪ್ಪಿಕೊಂಡು ಏನೂ ಅರಿಯದಂತೆ ನೋಡುತ್ತಿರುವ ಇಬ್ಬರು ಪುಟ್ಟ ಕಂದಮ್ಮಗಳು… “ನನ್ನ ಮಗನನ್ನು ತಂದುಕೊಡಿ” ಎಂದು ಎದೆ ಬಡಿದುಕೊಳ್ಳುತ್ತಿರುವ ಹೆತ್ತವ್ವಳ ರೋಧನ… ಇಡೀ ಊರನ್ನೇ ಆವರಿಸಿರುವ ಸ್ಮಶಾನ ಮೌನ.

ದಾವಣಗೆರೆಯ ಪಾಮೇನಹಳ್ಳಿಯಲ್ಲಿ ನಡೆದಿರುವ ಈ ದುರಂತ, ಎಂಥವರ ಕರುಳನ್ನೂ ಹಿಂಡಿ ಹಿಪ್ಪೆ ಮಾಡುತ್ತದೆ.

12 ವರ್ಷಗಳ ಪ್ರೀತಿಗೆ ಪ್ರಿಯಕರನೇ ಮುಖ್ಯವಾದನೇ?

ಹನ್ನೆರಡು ವರ್ಷಗಳ ಹಿಂದೆ ಪ್ರೀತಿಸಿ ಕೈಹಿಡಿದವಳು ಶೃತಿ. ಕೂಲಿ ನಾಲಿ ಮಾಡಿ ಬೆವರು ಸುರಿಸುತ್ತಿದ್ದ ರಘು (36), ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದ. ಇಬ್ಬರು ಮುದ್ದಾದ ಮಕ್ಕಳೊಂದಿಗೆ ನಗುನಗುತ್ತಾ ಸಾಗುತ್ತಿದ್ದ ಸಂಸಾರಕ್ಕೆ ರಘುವಿನ ಕುಡಿತದ ಚಟ ಸಣ್ಣ ಗ್ರಹಣ ಹಿಡಿಸಿತ್ತು. ಆದರೆ, ಆ ಸಣ್ಣ ಬಿರುಕೇ ಹೆಂಡತಿಯ ವಿಕೃತ ಮುಖವನ್ನು ಹೊರತರುತ್ತದೆ ಎಂದು ಆತ ಕನಸಿನಲ್ಲೂ ಎಣಿಸಿರಲಿಲ್ಲ.

ದಾವಣಗೆರೆಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶೃತಿಗೆ ನಿಟ್ಟುವಳ್ಳಿಯ ಉಬೇದುಲ್ಲಾ ಎಂಬಾತನ ಜೊತೆ ಅನೈತಿಕ ಸಂಬಂಧ ಬೆಳೆದಿತ್ತು. ಮೈಮನಸ್ಸು ಮರೆತಿದ್ದ ಆಕೆಗೆ, ತನ್ನ ಸುಖಕ್ಕೆ ಗಂಡನೇ ಅಡ್ಡಿ ಎನಿಸತೊಡಗಿದ್ದ. ಪರಿಣಾಮ— ತಾಳಿ ಕಟ್ಟಿದ ಗಂಡನನ್ನೇ ಮುಗಿಸಲು ಆಕೆ ಪ್ರಿಯಕರನೊಂದಿಗೆ ಭೀಕರ ಸ್ಕೆಚ್ ಹಾಕಿದ್ದಳು.

ಮದ್ಯದ ಅಮಲಿನಲ್ಲಿ ಉಸಿರು ಚೆಲ್ಲಿದ ಗಂಡ!

ಆಗಸ್ಟ್ 11ರಂದು ಪರಿಚಯಸ್ಥ ಸುರೇಶ್ ಮೂಲಕ ರಘುವನ್ನು ಬಾರ್‌ಗೆ ಕರೆಯಿಸಿಕೊಂಡ ಈ ಗ್ಯಾಂಗ್, ಕಂಠಪೂರ್ತಿ ಕುಡಿಸಿದೆ. ಬಳಿಕ ಹರಿಹರದ ತುಂಗಭದ್ರಾ ನದಿ ತೀರಕ್ಕೆ ಕರೆದೊಯ್ದು, ನಿರ್ದಯವಾಗಿ ಕತ್ತು ಹಿಸುಕಿ ಪ್ರಾಣ ತೆಗೆದಿದ್ದಾರೆ. ಸಾಕ್ಷ್ಯ ನಾಶ ಮಾಡಲು ಶವವನ್ನು ನದಿಯ ರಭಸದ ನೀರಿಗೆ ಎಸೆದು ಏನೂ ಅರಿಯದವರಂತೆ ಜಾಗ ಖಾಲಿ ಮಾಡಿದ್ದಾರೆ.

ಕೊಲೆಗಾತಿಯ ಕಣ್ಣೀರಿನ ಡ್ರಾಮಾ ಬಯಲಾಗಿದ್ದು ಹೇಗೆ?

ಗಂಡನನ್ನು ಕೊಂದು ನದಿಗೆ ಎಸೆದ ಶೃತಿ, ಊರಿಗೆ ಬಂದು ಆಡಿದ ನೌಟಂಕಿ ಸಿನಿಮಾ ಕಥೆಯನ್ನೂ ಮೀರಿಸುವಂತಿತ್ತು. “ನನ್ನ ಗಂಡ ಕಾಣುತ್ತಿಲ್ಲ” ಎಂದು ಅತ್ತೆಯ ಜೊತೆ ಸೇರಿ ಊರೆಲ್ಲ ಹುಡುಕಾಡಿದಳು. ಅತ್ತೆ ಕಾಸಿಲ್ಲದೆ ಬಡ್ಡಿಗೆ ಸಾಲ ತಂದು ಮಗನ ಹುಡುಕಾಟಕ್ಕೆ ಓಡಾಡುತ್ತಿದ್ದಾಗಲೂ ಈಕೆಯ ನಾಟಕ ಮುಂದುವರಿದಿತ್ತು. ಆದರೆ ಆಕೆಯ ನಡವಳಿಕೆಯಲ್ಲಿನ ಅನುಮಾನವೇ ಕೊನೆಗೆ ಆಕೆಯ ಕೊರಳಿಗೆ ಉರುಳಾಯಿತು.

ಸಂಬಂಧಿಕರ ಅನುಮಾನದ ಮೇರೆಗೆ ಹದಡಿ ಪೊಲೀಸರು ಶೃತಿಯನ್ನು ಹೆಡೆಮುರಿ ಕಟ್ಟಿದಾಗ, ಗಂಡನ ಕೊಲೆಯ ಅಸಲಿ ರಹಸ್ಯ ಬಟಾಬಯಲಾಗಿದೆ.

ಕಂಬಿ ಎಣಿಸುತ್ತಿರುವ ಪಾಪಿಗಳು, ಕಣ್ಣೀರಲ್ಲೇ ಕೈತೊಳೆಯುತ್ತಿರುವ ಕಂದಮ್ಮಗಳು!

ಸದ್ಯ ಹದಡಿ ಪೊಲೀಸರು ಶೃತಿ, ಆಕೆಯ ಪ್ರಿಯಕರ ಉಬೇದುಲ್ಲಾ ಮತ್ತು ಸುರೇಶ್‌ಗೆ ಕೋಳ ತೊಡಿಸಿ ಜೈಲಿಗಟ್ಟಿದ್ದಾರೆ. ನದಿಯಲ್ಲಿ ರಘುವಿನ ದೇಹಕ್ಕಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.

ಕಾಮದ ಅಮಲಿಗೆ ಬಿದ್ದ ಹೆಂಡತಿ ಇಡೀ ಸಂಸಾರವನ್ನೇ ಬಲಿ ಕೊಟ್ಟಿದ್ದಾಳೆ. ಅಪ್ಪ ಇಲ್ಲ, ಅಮ್ಮ ಜೈಲಿನಲ್ಲಿ… ಯಾವ ತಪ್ಪಿಗೂ ಶಿಕ್ಷೆ ಅನುಭವಿಸುವಂತಾದ ಆ ಮುಗ್ಧ ಮಕ್ಕಳ ಭವಿಷ್ಯ ಈಗ ಕತ್ತಲಿಗೆ ಜಾರಿದೆ.

Leave a Reply

Your email address will not be published. Required fields are marked *