
ಧಾರವಾಡ:ಬರಗಾಲದ ಪರಿಸ್ಥಿತಿ ಇರುವುದರಿಂದ ಸಾರ್ವಜನಿಕರಿಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಉತ್ತಮ ಸೇವೆ ಒದಗಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ತುಳಸಿ ಮದ್ದಿನೇನಿ ಅವರು ಸೂಚಿಸಿದರು.
ಅವರು ಗುರುವಾರದಂದು ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆಯಡಿ ಜೂನ್ 2026ರ ಅಂತ್ಯದ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಆರೋಗ್ಯ ಇಲಾಖೆಯಿಂದ ನಡೆಯುತ್ತಿರುವ ಆರೋಗ್ಯ ತಪಾಸಣಾ ಶಿಬಿರ, ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ, ಡೆಂಗ್ಯೂ ಹಾಗೂ ಮಲೇರಿಯಾ ನಿಯಂತ್ರಣ ಕ್ರಮಗಳು ಮತ್ತು ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತಿರುವ ಆರೋಗ್ಯ ತಪಾಸಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಗೃಹ ಆರೋಗ್ಯ ಯೋಜನೆಯಲ್ಲಿ ಪ್ರತಿ ಮನೆಗೆ ಅಂಗನವಾಡಿಯ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ, ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹ ಆರೋಗ್ಯ ಶಿಬಿರವನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಸರ್ಕಾರದ ವಿವಿಧ ಯೋಜನೆಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮರಣ ಹೊಂದಿದ ಫಲಾನುಭವಿಗಳ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಂದ ಮಾಹಿತಿ ಪಡೆದು, ಗೃಹಲಕ್ಷ್ಮಿ ಯೋಜನೆಯಲ್ಲಿ ಮರಣ ಹೊಂದಿದ ಫಲಾನುಭವಿಗಳ ಹೆಸರನ್ನು ಪರಿಶೀಲಿಸಿ ಯೋಜನೆಯಿಂದ ತೆಗೆದುಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಧಾರವಾಡ ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಉತ್ತಮಗೊಂಡು ರಾಜ್ಯದಲ್ಲಿ ಮುಂಚೂಣಿ ಸ್ಥಾನ ಪಡೆಯಬೇಕು. ಶಾಲಾ ಮಕ್ಕಳಿಗಾಗಿ ನಿರಂತರ ಆ್ಯಪ್‌ನಲ್ಲಿ ಹಾಜರಾತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಶಾಲಾ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (AI) ಪಠ್ಯಕ್ರಮದ ಅನುಷ್ಠಾನದ ಕುರಿತು, ಶಾಲೆಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಹಾಗೂ ಜಿಲ್ಲೆಯಿಂದ ವರ್ಗಾವಣೆಗೊಂಡ ವಿದ್ಯಾರ್ಥಿಗಳ ವಿವರವನ್ನು ಪಡೆದರು. ಬೇರೆ ಬೇರೆ ಜಿಲ್ಲೆಯಿಂದ ಕೋಚಿಂಗ್ ಪಡೆಯಲು ಬಂದ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಬೇಕು ಎಂದು ಹೇಳಿದರು.
ಅಂಗವಿಕಲರಿಗೆ ಯುಡಿಐಡಿ (UDID) ಕಾರ್ಡ್‌ಗಳನ್ನು ವಿತರಣೆ ಮಾಡಬೇಕು. ಇಲಾಖೆಯಿಂದ ಸ್ವ-ಉದ್ಯೋಗಕ್ಕೆ ತರಬೇತಿ ನೀಡಿ, ಉದ್ಯೋಗ ಕೈಗೊಳ್ಳಲು ಸಹಾಯಧನ ಸೌಲಭ್ಯ ಒದಗಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಬೇಕು. ಸಾರ್ವಜನಿಕರಿಗೆ ಪ್ರತಿ ತಿಂಗಳು ನೀಡುವ ಪಡಿತರ ಆಹಾರವನ್ನು ನಿಗದಿತ ಅವಧಿಯೊಳಗೆ ವಿತರಿಸಬೇಕು. ಸರ್ಕಾರಿ ಅಧಿಕಾರಿಗಳು ಕರ್ತವ್ಯ ಆ್ಯಪ್‌ನಲ್ಲಿ ಕಡ್ಡಾಯವಾಗಿ ಹಾಜರಾತಿ ನಮೂದಿಸಬೇಕು. ಹಾಜರಾತಿ ದಾಖಲಿಸದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಜಿಲ್ಲೆಯಲ್ಲಿ 2026ರ ಮುಂಗಾರು ಹಂಗಾಮಿನಲ್ಲಿ ಜೂನ್ 1ರಿಂದ ಜುಲೈ 29ರವರೆಗೆ ವಾಡಿಕೆ ಮಳೆ 265.9 ಮಿ.ಮೀ. ಆಗಬೇಕಾಗಿದ್ದು, ವಾಸ್ತವವಾಗಿ 176.5 ಮಿ.ಮೀ. ಮಳೆಯಾಗಿದ್ದು, ಶೇ.34ರಷ್ಟು ಮಳೆ ಕೊರತೆಯಾಗಿದೆ ಎಂದು ಹೇಳಿದರು.

2026ರ ನೈರುತ್ಯ ಮುಂಗಾರು (ಜೂನ್ 1ರಿಂದ ಜುಲೈ 29ರವರೆಗೆ) ಅವಧಿಯಲ್ಲಿ ಧಾರವಾಡ ಜಿಲ್ಲೆಯ 8 ತಾಲೂಕುಗಳ ಪೈಕಿ ಕುಂದಗೋಳ ತಾಲೂಕಿನಲ್ಲಿ ಅಧಿಕ ಮಳೆ ಹಾಗೂ ಉಳಿದ 7 ತಾಲೂಕುಗಳಲ್ಲಿ ಸಾಧಾರಣ ಮಳೆ ಕೊರತೆ ಕಂಡುಬಂದಿದೆ ಎಂದು ತಿಳಿಸಿದರು.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಕೃಷಿ ಬೆಳೆಯ 2.82 ಲಕ್ಷ ಹೆಕ್ಟೇರ್ ಗುರಿ ಇದ್ದು, ಪ್ರಸ್ತುತ 2.71 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಶೇ.95.89ರಷ್ಟು ಸಾಧನೆಯಾಗಿದೆ. ತೋಟಗಾರಿಕೆ ಬೆಳೆಯ 22,857 ಹೆಕ್ಟೇರ್ ಗುರಿ ಇದ್ದು, ಪ್ರಸ್ತುತ 16,234 ಹೆಕ್ಟೇರ್ ಬಿತ್ತನೆಯಾಗಿದ್ದು, ಶೇ.71ರಷ್ಟು ಸಾಧನೆಯಾಗಿದೆ ಎಂದು ಹೇಳಿದರು.
2026ರ ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಲ್ಲಿ 18,457 ಕ್ವಿಂಟಲ್ ಬಿತ್ತನೆ ಬೀಜ ವಿತರಣೆಯ ಗುರಿ ಇದ್ದು, 17,720 ಕ್ವಿಂಟಲ್ ಪೂರೈಕೆಯಾಗಿದೆ. ಪ್ರಸ್ತುತ ರೈತರಿಗೆ 15,856 ಕ್ವಿಂಟಲ್ ವಿತರಣೆ ಮಾಡಲಾಗಿದ್ದು, 1,631 ಕ್ವಿಂಟಲ್ ದಾಸ್ತಾನು ಉಳಿದಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜದ ಕೊರತೆ ಇರುವುದಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 54,648 ಮೆಟ್ರಿಕ್ ಟನ್ ರಸಗೊಬ್ಬರದ ಗುರಿಯಿದ್ದು, 57,240 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜಾಗಿದೆ. ರೈತರಿಗೆ 35,640 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟ ಮಾಡಲಾಗಿದ್ದು, 21,600 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ. ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಉಂಟಾಗುವುದಿಲ್ಲ ಎಂದರು.
ಪ್ರಸ್ತುತ ಜಿಲ್ಲೆಯ 3 ತಾಲೂಕುಗಳ ಗ್ರಾಮೀಣ ಪ್ರದೇಶದ 18 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, 21 ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕುಗಳಲ್ಲಿ ಮಲಪ್ರಭ ಜಲಾಶಯದಿಂದ ಕಾಲುವೆಗಳ ಮೂಲಕ 60 ಕುಡಿಯುವ ನೀರಿನ ಕೆರೆಗಳನ್ನು ಮೇ ತಿಂಗಳಲ್ಲಿ ಭರ್ತಿ ಮಾಡಲಾಗಿದ್ದು, ಆಗಸ್ಟ್ ಅಂತ್ಯದವರೆಗೆ ನಿರ್ವಹಿಸಬಹುದಾಗಿದೆ ಎಂದು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ 1,84,037 ದೊಡ್ಡ ಜಾನುವಾರುಗಳು ಹಾಗೂ 1,83,524 ಸಣ್ಣ ಜಾನುವಾರುಗಳಿದ್ದು, ಒಟ್ಟು 3,72,891 ಟನ್ ಮೇವು ಲಭ್ಯವಿದೆ. ಮುಂದಿನ 45 ವಾರಗಳವರೆಗೆ ಸಾಕಾಗುವಷ್ಟು ಮೇವು ಸಂಗ್ರಹವಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ 7 ಮೇವು ಬ್ಯಾಂಕ್‌ಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಜೂನ್ 1ರಿಂದ ಜುಲೈ 29ರವರೆಗೆ ಜಿಲ್ಲೆಯಲ್ಲಿ ಯಾವುದೇ ಮಾನವ ಜೀವಹಾನಿ ಸಂಭವಿಸಿಲ್ಲ. ಜುಲೈ 24, 2026ರಂದು ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದಲ್ಲಿ ದನದ ಕೊಟ್ಟಿಗೆ ಕುಸಿದು ಒಂದು ಆಕಳು ಮೃತಪಟ್ಟಿದ್ದು, ರೂ.37,500 ಪರಿಹಾರ ವಿತರಿಸಲಾಗಿದೆ.
ಜುಲೈ 7, 2026ರಂದು ಕುಂದಗೋಳ ತಾಲೂಕಿನಲ್ಲಿ ಒಂದು ಮನೆ ಭಾಗಶಃ ಹಾನಿಗೊಳಗಾಗಿದ್ದು, ರೂ.6,500 ಪರಿಹಾರ ವಿತರಿಸಲಾಗಿದೆ. ಮಾರ್ಚ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ಕಲಘಟಗಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕುಗಳಲ್ಲಿ 1,022 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 1,221 ರೈತರಿಗೆ ರೂ.1.72 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ್ ಘಾಳಿ ಹಾಗೂ ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶೇಖ್ ಅಲಿಂ ಸಿದ್ದಿಕ್ಕಿ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು ಸ್ವಾಗತಿಸಿ, ವಂದಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ. ಸೇರಿದಂತೆ ಎಲ್ಲ ತಾಲೂಕುಗಳ ತಹಶೀಲ್ದಾರರು ಹಾಗೂ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನವಲಗುಂದ ಮತ್ತು ಅಣ್ಣಿಗೇರಿಯಲ್ಲಿ ಬೆಳೆ ಸಮೀಕ್ಷೆ ಹಾಗೂ ಬೆಣ್ಣೆ ಹಳ್ಳ ತಡೆಗೋಡೆ ನಿರ್ಮಾಣ ಕಾಮಗಾರಿ ಪರಿಶೀಲನೆ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ತುಳಸಿ ಮದ್ದಿನೇನಿ ಅವರು ಗುರುವಾರದಂದು ಬೆಳಿಗ್ಗೆ ನವಲಗುಂದ ಮತ್ತು ಅಣ್ಣಿಗೇರಿಯಲ್ಲಿ ಬೆಳೆ ಸಮೀಕ್ಷೆ ಪರಿಶೀಲನೆ ನಡೆಸಿದರು. ಬಳಿಕ ಬೆಣ್ಣೆ ಹಳ್ಳ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯತ್ ಸಿಇಒ ಭುವನೇಶ ಪಾಟೀಲ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

