ಚನ್ನಪಟ್ಟಣ ತಹಶೀಲ್ದಾರ್ ಸರ್ಕಾರಿ ನಿವಾಸದಲ್ಲೇ ಭೀಕರ ಕೃತ್ಯ: ಅಸಹಜ ಲೈಂಗಿಕ ದೌರ್ಜನ್ಯ, ದರೋಡೆ, ಕೊಲೆ ಯತ್ನ ಆರೋಪ; ಓರ್ವ ಬಂಧನ

Spread the love

ಚನ್ನಪಟ್ಟಣ: ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆಯೇ ಅವರ ಸರ್ಕಾರಿ ನಿವಾಸದಲ್ಲಿ ಅಸಹಜ ಲೈಂಗಿಕ ದೌರ್ಜನ್ಯ, ದರೋಡೆ ಹಾಗೂ ಕೊಲೆ ಯತ್ನ ನಡೆದಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್. ಗಿರೀಶ್ ನೀಡಿರುವ ದೂರಿನ ಆಧಾರದ ಮೇಲೆ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಅನುಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಪೊಲೀಸರ ಮಾಹಿತಿ ಪ್ರಕಾರ, ಮೈಸೂರು ಮೂಲದ ಅನುಶ್ ಎಂಬಾತನಿಗೆ ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರ ಪರಿಚಯ ಫೇಸ್‌ಬುಕ್ ಮೂಲಕವಾಗಿತ್ತು. ಇದೇ ಪರಿಚಯವನ್ನು ದುರುಪಯೋಗಪಡಿಸಿಕೊಂಡು ಜೂನ್ 28ರಂದು ಅನುಶ್ ತನ್ನ ಸ್ನೇಹಿತರಾದ ಶೋಭರಾಜನ್ ಹಾಗೂ ನವೀನ್ ಅವರೊಂದಿಗೆ ಚನ್ನಪಟ್ಟಣದಲ್ಲಿರುವ ತಹಶೀಲ್ದಾರ್ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದಾನೆ.

ದೂರಿನ ಅನ್ವಯ, ರಾತ್ರಿ ವೇಳೆ ಆರೋಪಿಗಳು ತಹಶೀಲ್ದಾರ್ ಅವರೊಂದಿಗೆ ಮದ್ಯಪಾನ ಮಾಡಿದ್ದು, ಬಳಿಕ ಅವರಿಗೆ ನೀಡಿದ ಜ್ಯೂಸ್‌ನಲ್ಲಿ ಪ್ರಜ್ಞೆ ತಪ್ಪಿಸುವ ಮಾತ್ರೆ ಅಥವಾ ಮಂಕುಬೂದಿ ಬೆರೆಸಿದ್ದಾರೆ ಎನ್ನಲಾಗಿದೆ. ಜ್ಯೂಸ್ ಸೇವಿಸಿದ ಬಳಿಕ ತಹಶೀಲ್ದಾರ್ ಪ್ರಜ್ಞೆ ಕಳೆದುಕೊಂಡಾಗ ಆರೋಪಿಗಳು ಅವರ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದರೊಂದಿಗೆ ತಹಶೀಲ್ದಾರ್ ಧರಿಸಿದ್ದ ಚಿನ್ನದ ಸರ ಹಾಗೂ ಉಂಗುರಗಳನ್ನು ದೋಚಿಕೊಂಡ ಆರೋಪಿಗಳು, ₹10 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ಮಾಡಲು ಸಹ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯಿಂದ ತಹಶೀಲ್ದಾರ್ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ತಹಶೀಲ್ದಾರ್ ನೀಡಿದ ದೂರಿನ ಮೇರೆಗೆ ಚನ್ನಪಟ್ಟಣ ಟೌನ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಅನುಶ್ (ಎ1)ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆಮರೆಸಿಕೊಂಡಿರುವ ಶೋಭರಾಜನ್ ಹಾಗೂ ನವೀನ್ ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಜಿಲ್ಲೆಯ ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆಯೇ ಅವರ ಸರ್ಕಾರಿ ನಿವಾಸದಲ್ಲಿ ಇಂತಹ ಘಟನೆ ನಡೆದಿದೆ ಎಂಬ ಆರೋಪ ಸಾರ್ವಜನಿಕ ವಲಯ ಹಾಗೂ ಸರ್ಕಾರಿ ನೌಕರರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *