
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿದ್ದು, ಬ್ಯಾಂಕ್ ಖಾತೆ ಸಂಖ್ಯೆಗಳೇ ಇಲ್ಲದ 23,262 ಫಲಾನುಭವಿಗಳ ಹೆಸರಿಗೆ ₹46.52 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಅಂಶ ಮಹಾಲೆಕ್ಕಪರಿಶೋಧಕರ (ಸಿಎಜಿ) ಪರಿಶೀಲನೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಸಿಎಜಿ ನಡೆಸಿದ ಆಡಿಟ್‌ನಲ್ಲಿ ಯೋಜನೆಗೆ ಸಂಬಂಧಿಸಿದ ಬ್ಯಾಂಕ್ ಖಾತೆ ಮತ್ತು ಫಲಾನುಭವಿಗಳ ಮಾಹಿತಿಯಲ್ಲಿ ಹಲವಾರು ಅಸಂಗತತೆಗಳು ಕಂಡುಬಂದಿವೆ. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (ಡಿಬಿಟಿ) ವ್ಯವಸ್ಥೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗಬೇಕಾದರೆ, ಖಾತೆ ಸಂಖ್ಯೆಗಳೇ ಇಲ್ಲದ ಸಾವಿರಾರು ಮಂದಿಗೆ ಹಣ ವರ್ಗಾವಣೆಯಾಗಿರುವುದು ಪ್ರಶ್ನೆಗಳಿಗೆ ಕಾರಣವಾಗಿದೆ.
ಇದರ ಜೊತೆಗೆ, ಸುಮಾರು 19 ಸಾವಿರ ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ ಜೋಡಣೆಗೊಂಡಿರುವುದು ಹಾಗೂ ಆ ಖಾತೆಗೆ ಯೋಜನೆಯ ಹಣ ಜಮೆಯಾಗಿರುವುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಮಾಹಿತಿ ಮತ್ತು ಸ್ಪಷ್ಟೀಕರಣ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಿಎಜಿ ಕೇಳಿದೆ ಎನ್ನಲಾಗಿದೆ.

ಯೋಜನೆಯಡಿ ಈಗಾಗಲೇ ₹75 ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಆದರೆ, ಫಲಾನುಭವಿಗಳ ಗುರುತಿನ ಮಾಹಿತಿ ಮತ್ತು ಬ್ಯಾಂಕ್ ಖಾತೆಗಳ ನಿರ್ವಹಣೆಯಲ್ಲಿ ಗಂಭೀರ ಲೋಪಗಳು ಕಂಡುಬಂದಿರುವುದು ಆಡಳಿತಾತ್ಮಕ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇನ್ನೊಂದೆಡೆ, ಸಿಎಜಿ ಡೇಟಾ ಅನಾಲಿಟಿಕ್ಸ್ ವಿಭಾಗ ನಡೆಸಿದ ಪರಿಶೀಲನೆಯಲ್ಲಿ 8,995 ಬ್ಯಾಂಕ್ ಖಾತೆಗಳಿಗೆ ಸುಮಾರು ₹1.80 ಕೋಟಿ ಮೊತ್ತವನ್ನು ಪುನರಾವರ್ತಿತವಾಗಿ ಜಮೆ ಮಾಡಿರುವುದು ಪತ್ತೆಯಾಗಿದೆ. ಅಲ್ಲದೆ, 10,36,308 ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಬದಲಾಯಿಸಿರುವುದು ಕೂಡ ಗಮನ ಸೆಳೆದಿದೆ.
ಈ ಎಲ್ಲ ಅಂಶಗಳು ಯೋಜನೆಯ ಪಾರದರ್ಶಕತೆ ಮತ್ತು ಹಣ ವರ್ಗಾವಣೆಯ ಪ್ರಕ್ರಿಯೆ ಕುರಿತು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಈ ನಡುವೆ, ಸಿಎಜಿ ವರದಿಯ ಸಂಪೂರ್ಣ ವಿವರಗಳ ಕುರಿತು ಸ್ಪಷ್ಟನೆ ನೀಡುವಂತೆ ಕೇಳಿದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

