ಮೆಕ್ಕೆಜೋಳ ಖರೀದಿ ವಂಚನೆಯಲ್ಲಿ ಕುಂದಗೋಳ ಪಿಎಸ್ಐ ( ಪೋಲಿಸ್ ಸಬ್ ಇನ್ಸಪೆಕ್ಟರ) ಶಾಮೀಲು ಆರೋಪ

Spread the love

ಕುಂದಗೋಳ : ದಾವಣಗೆರೆ ಮೂಲದ ವ್ಯಕ್ತಿಯೊಬ್ಬ ಸ್ಥಳೀಯ ರೈತರೊಬ್ಬರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ಖರೀದಿಸಿ ವಂಚಿಸಿರುವ ಪ್ರಕರಣದಲ್ಲಿ ಕುಂದಗೋಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರೇ ಆರೋಪಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ರೈತಪರ ಹೋರಾಟಗಾರ ಮಹೇಶ ಬ. ಕಲಘಟಗಿ ಗಂಭೀರ ಆರೋಪ ಮಾಡಿದ್ದಾರೆ.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ದಾವಣಗೆರೆ ಮೂಲದ ಕೆ.ಎಸ್. ಪ್ರಶಾಂತ ಎಂಬ ವ್ಯಕ್ತಿಯು ಕಳೆದ ಜನವರಿ 4, 2026 ರಂದು ಸಂಶಿ ಗ್ರಾಮದ ರೈತ ಶಿವರಾಜ ಗಂಗಪ್ಪ ಕೊಡ್ಲಿವಾಡ ಎಂಬುವರಿಂದ ಪ್ರತಿ ಕ್ವಿಂಟಲ್‌ಗೆ 2,200 ರೂ. ದರದಂತೆ ಒಟ್ಟು 1,250 ಕ್ವಿಂಟಲ್ ನ್ನು 28 ಲಕ್ಷ ರೂ ಗೆ ಮೆಕ್ಕೆಜೋಳವನ್ನು ಖರೀದಿಸಿದ್ದನು. ಇದರಲ್ಲಿ ಕೇವಲ 10,ಲಕ್ಷ ರೂ.ಗಳನ್ನು ಮಾತ್ರ ಪಾವತಿಸಿ, ಬಾಕಿ ಉಳಿದ 18,ಲಕ್ಷ ರೂ.ಗಳನ್ನು ನೀಡದೇ ಇಲ್ಲಿಯವರೆಗೂ ವಂಚಿಸುತ್ತಾ ಬಂದಿದ್ದಾನೆ ಎಂದು ತಿಳಿಸಿದರು.

ಈ ವಂಚನೆ ಕುರಿತು ಸಂತ್ರಸ್ತ ರೈತರು ಮಾರ್ಚ್ 6, 2026 ರಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (ಎಸ್‌ಪಿ) ದೂರು ಸಲ್ಲಿಸಿದ್ದರು. ಎಸ್‌ಪಿ ಅವರು ತಕ್ಷಣವೇ ಕುಂದಗೋಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರಿಗೆ ದೂರವಾಣಿ ಕರೆ ಮಾಡಿ ದೂರನ್ನು ಸ್ವೀಕರಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಆದರೆ, ಸಂತ್ರಸ್ತರು ಠಾಣೆಗೆ ಹೋದಾಗ ಕುಂದಗೋಳ ಪಿಎಸ್‌ಐ ಅವರು ಬೇಜವಾಬ್ದಾರಿಯಿಂದ ವರ್ತಿಸಿದ್ದಲ್ಲದೆ, ರೈತರು ನೀಡಿದ್ದ ಮೂಲ ದೂರನ್ನು ಬದಲಾಯಿಸಿ, ತಮಗೆ ಹಾಗೂ ಆರೋಪಿಗೆ ಅನುಕೂಲವಾಗುವ ರೀತಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿಯು ಈಗಾಗಲೇ ಇಲಾಖೆಯ ಕಣ್ಣು ತಪ್ಪಿಸಿ ಹಲವಾರು ರೈತರಿಗೆ ಇದೇ ರೀತಿ ವಂಚಿಸುತ್ತಾ ಬಂದಿದ್ದಾನೆ. ಕುಂದಗೋಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರ ನಡೆ ಮತ್ತು ವರ್ತನೆಯನ್ನು ಗಮನಿಸಿದರೆ, ಅವರು ಆರೋಪಿಯಿಂದ ಲಂಚ ಸ್ವೀಕರಿಸಿ ಆತನೊಂದಿಗೆ ಶಾಮೀಲಾಗಿರುವ ಬಲವಾದ ಸಂಶಯ ವ್ಯಕ್ತವಾಗುತ್ತಿದೆ ಎಂದು ಮಹೇಶ ಕಲಘಟಗಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಕಷ್ಟಪಟ್ಟು ಬೆಳೆದ ಬೆಳೆಗೆ ಹಣ ಸಿಗದೆ ರೈತರು ಬೀದಿಗೆ ಬೀಳುವಂತಾಗಿದೆ. ಆದ್ದರಿಂದ ಮುಂದಿನ ಒಂದು ವಾರದೊಳಗಾಗಿ ಸಂಬಂಧಪಟ್ಟ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಿ, ಬಾಕಿ ಹಣ ಕೊಡಿಸದಿದ್ದಲ್ಲಿ ಕುಂದಗೋಳ ಪೊಲೀಸ್ ಸ್ಟೇಷನ್ ಎದುರಿಗೆ ವಿವಿಧ ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಗಾರರೊಂದಿಗೆ ಒಗ್ಗೂಡಿ ‘ಆಮರಣಾಂತರ ಉಪವಾಸ ಸತ್ಯಾಗ್ರಹ’ ಹಮ್ಮಿಕೊಳ್ಳಲಾಗುವುದು ಎಂದು ಅವರು ಮಾಧ್ಯಮಗಳ ಮೂಲಕ ಪ್ರಖರ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಹೇಶ ಬಿ. ಕಲಘಟಗಿ, ಶಿವು ಎಂ. ಕರಡಿ, ರಮೇಶ ಇಂಗಳಗಿ, ಈಶ್ವರಗೌಡ ಪಾಟೀಲ, ಶಿವು ಕೊಡ್ಲಿವಾಡ, ವೆಂಕಬಗೌಡ ಶಾನವಾಡ, ಅಡಿವೇಪ್ಪಗೌಡ ಪಾಟೀಲ ಹಾಗೂ ನವೀನ ಪಾಟೀಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *