
ಕುಂದಗೋಳ: ತಾಲ್ಲೂಕಿನಲ್ಲಿ ಹೆಸ್ಕಾಂ ಇಲಾಖೆಗೆ ಹಿಡಿದ ಗ್ರಹಣವೋ ಅಥವಾ ಕಳಂಕವೋ ತಿಳಿಯದಂತಾಗಿದ್ದು, ವಿದ್ಯುತ್ ಸ್ಪರ್ಶದಿಂದ ರೈತರೊಬ್ಬರು ದುರಂತ ಅಂತ್ಯ ಕಂಡಿರುವ ಘಟನೆ ತಾಲೂಕಿನ ಗೌಡಗೇರಿ ಗ್ರಾಮದಲ್ಲಿ ಸಂಭವಿಸಿದೆ. ಮೊನ್ನೆಯಷ್ಟೇ ಸಂಶಿ ಗ್ರಾಮದಲ್ಲಿ 06 ವರ್ಷದ ಮುಗ್ಧ ಬಾಲಕಿ ವಿದ್ಯುತ್ ತಾಗಿ ಮೃತಪಟ್ಟ ಘಟನೆ ಹಸಿರಾಗಿರುವಾಗಲೇ, ಇದೀಗ ಮತ್ತೊಂದು ಜೀವ ಬಲಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಗೌಡಗೇರಿ ಗ್ರಾಮದ ನಿವಾಸಿಯಾದ ಸುರೇಶ ಬಸಪ್ಪ ಮಣ್ಣೂರ (52) ಮೃತಪಟ್ಟ ದುರ್ದೈವಿ ರೈತರಾಗಿದ್ದಾರೆ. ಇವರು ಗ್ರಾಮದ ಸರ್ವೆ ನಂಬರ್ 117/2 ರಲ್ಲಿರುವ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಜಮೀನಿನಲ್ಲಿದ್ದ ವಿದ್ಯುತ್ ಕಂಬ ಹಾಗೂ ಬೋರ್‌ವೆಲ್ ಪಂಪ್‌ಸೆಟ್ ನಡುವೆ ಬೆಳೆದಿದ್ದ ಹುಲ್ಲು ತೆಗೆಯುತ್ತಿದ್ದ ಸಂದರ್ಭದಲ್ಲಿ, ಮೇ 28ರ ಗುರುವಾರ ಮಧ್ಯಾಹ್ನ ವೇಳೆ ಹರಿದಾಡುತ್ತಿದ್ದ ಲೈವ್ ವಿದ್ಯುತ್ ತಂತಿ ಇವರಿಗೆ ಸ್ಪರ್ಶಿಸಿದೆ ಎನ್ನಲಾಗಿದೆ. ತಂತಿಯಲ್ಲಿದ್ದ ಪ್ರಖರ ವಿದ್ಯುತ್ ದೇಹಕ್ಕೆ ಪ್ರವಹಿಸಿದ ಪರಿಣಾಮ ಸುರೇಶ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕುಂದಗೋಳ ತಾಲ್ಲೂಕಿನಲ್ಲಿ ಸಾಲು ಸಾಲು ವಿದ್ಯುತ್ ಅವಘಡಗಳು ಸಂಭವಿಸುತ್ತಿದ್ದರೂ ಹೆಸ್ಕಾಂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇಲಾಖೆಗೆ ಹಿಡಿದ ಗ್ರಹಣವೋ ಅಥವಾ ಅಧಿಕಾರಿಗಳ ಬೇಜವಾಬ್ದಾರಿತನವೋ ತಿಳಿಯದಂತಾಗಿದ್ದು, ಇಲಾಖೆಯ ಈ ಉದಾಸೀನ ಧೋರಣೆಗೆ ಸಾರ್ವಜನಿಕರು ಹಾಗೂ ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಇನ್ನಾದರೂ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಇಂತಹ ಅಪಾಯಕಾರಿ ಸ್ಥಳಗಳನ್ನು ತಕ್ಷಣ ಸರಿಪಡಿಸಿ, ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

