ಖಾತೆ ಬದಲಾವಣೆಗೆ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೆದಾರ್ ಸುರೇಶ್ ಅರಕೇರಿ; ತಡರಾತ್ರಿಯವರೆಗೆ ಕಡತಗಳ ಪರಿಶೀಲನೆ

Spread the love

ಕುಂದಗೋಳ: ತಹಶೀಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸ್ತೆದಾರ್ ಸುರೇಶ್ ಅರಕೇರಿ ಎಂಬುವವರು ಖಾತೆ ಬದಲಾವಣೆಗಾಗಿ ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿರುವುದು ಇಡೀ ಕಂದಾಯ ಇಲಾಖೆಯೇ ತಲೆತಗ್ಗಿಸುವಂತಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲೂಕಿನ ದುಂಡಸಿ ಗ್ರಾಮದ ನಿವಾಸಿಯಾದ ಹಜರತ್ ಅಲಿ ತಂದೆ ಇಮಾಮ್ ಸಾಬ್ ಅರಳಿಕಟ್ಟಿ ಎಂಬುವವರಿಂದ ಖಾತೆ ಬದಲಾವಣೆ ಮಾಡಿಕೊಡಲು ಸುರೇಶ್ ಅರಕೇರಿ ಅವರು ಭೂಮಿ ವಿಭಾಗದಲ್ಲಿ 2,000 ರೂಪಾಯಿಗಳ ಲಂಚದ ಹಣವನ್ನು ಪಡೆದಿದ್ದಾರೆ.ಮೊದಲಿಗೆ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಆರಂಭಿಸಿ, ನಂತರ ಕಂದಾಯ ನಿರೀಕ್ಷಕರಾಗಿ, ಸದ್ಯ ಭೂಮಿ ವಿಭಾಗದಲ್ಲಿ ಶಿರಸ್ತೆದಾರರಾಗಿ ಬರೋಬ್ಬರಿ 20 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುವ ಇಂತಹ ಹಿರಿಯ ಅಧಿಕಾರಿಯೊಬ್ಬರು ಕೇವಲ ಎರಡು ಸಾವಿರ ರೂಪಾಯಿಗಳ ಆಮಿಷಕ್ಕೆ ಬಿದ್ದು ಸಿಕ್ಕಿಬಿದ್ದಿರುವುದು ಇಲಾಖೆಯ ನೈತಿಕ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ. ಬಡ ಜನಸಾಮಾನ್ಯರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು, ಈ ರೀತಿ ಭ್ರಷ್ಟಾಚಾರಕ್ಕೆ ಕೈಹಾಕಿರುವುದು ಅತ್ಯಂತ ಖಂಡನೀಯ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ.ಬಲಿಷ್ಠ ವ್ಯವಸ್ಥೆಯೊಂದರ ನಂಬಿಕೆಗೆ ದ್ರೋಹ ಬಗೆದ ಈ ಅಧಿಕಾರಿಯ ವಿರುದ್ಧ ಹಜರತ್ ಅಲಿ ಅವರು ಧೈರ್ಯವಾಗಿ ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ, ಲೋಕಾಯುಕ್ತದ ಹಿರಿಯ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ವೆಂಕನಗೌಡ ಪಾಟೀಲ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಪ್ರಭುಲಿಂಗಯ್ಯ ಹಿರೇಮಠ ಮತ್ತು ಪ್ರಸಾದ್ ಪಣೇಕರ್ ಅವರನ್ನೊಳಗೊಂಡ ದಕ್ಷ ಅಧಿಕಾರಿಗಳ ತಂಡವು ಶುಕ್ರವಾರದಂದು ಕುಂದಗೋಳ ತಹಶೀಲ್ದಾರ್ ಕಚೇರಿಗೆ ದಿಢೀರ್ ದಾಳಿ ನಡೆಸಿದೆ.ದಾಳಿಯ ಬಳಿಕ ಕಂದಾಯ ಇಲಾಖೆಯ ಹಲವಾರು ಪ್ರಮುಖ ಕಡತಗಳನ್ನು ವಶಪಡಿಸಿಕೊಂಡ ಅಧಿಕಾರಿಗಳ ತಂಡವು ತಡರಾತ್ರಿಯವರೆಗೂ ತೀವ್ರ ಪರಿಶೀಲನೆ ಮತ್ತು ವಿಚಾರಣೆಯನ್ನು ಮುಂದುವರಿಸಿತ್ತು. ಈ ಹಠಾತ್ ಬೆಳವಣಿಗೆಯು ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಇನ್ನುವರೆಗೂ ಲೋಕಾಯುಕ್ತ ಅಧಿಕಾರಿಗಳು ಪರಿಶಿಲನೆ ನಡೆಸಿದ್ದಾರೆ.ಸದ್ಯ ದೊರೆತಿರುವ ಲೋಕಾಯುಕ್ತ ಅಧಿಕಾರಿಗಳ ಮೂಲಗಳ ಮಾಹಿತಿ ಪ್ರಕಾರ, ಲಂಚದ ಆರೋಪ ಹೊತ್ತಿರುವ ಶಿರಸ್ತೆದಾರ್ ಸುರೇಶ್ ಅರಕೇರಿ ಅವರ ಮೇಲೆ ಅಧಿಕೃತವಾಗಿ ಭ್ರಷ್ಟಾಚಾರ ನಿರೋಧಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


Leave a Reply

Your email address will not be published. Required fields are marked *